ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್​ಐಆರ್| Mahua Moitra

Mahuva moitra
Published on

Mahua Moitra: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಲೆ ಕಡಿದು ಮೇಜಿನ ಮೇಲೆ ಇಡಬೇಕು ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಛತ್ತೀಸ್​ಗಢದ ರಾಯ್​​ಪುರದಲ್ಲಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ಭಾನುವಾರ(ಆಗಸ್ಟ್​ 31) ವರದಿಯಾಗಿದೆ.

ಸ್ಥಳೀಯ ನಿವಾಸಿ ಗೋಪಾಲ್ ಸಮಂತೋ ನೀಡಿದ ದೂರಿನ ಆಧಾರದ ಮೇಲೆ, ಶನಿವಾರ ಮಾನಾ ಪೊಲೀಸ್ ಠಾಣೆಯಲ್ಲಿ ಮೊಯಿತ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 196 (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 197 (ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತವಾದ ಆರೋಪಗಳು, ಪ್ರತಿಪಾದನೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಾಲ್ ನೀಡಿದ ದೂರಿನಲ್ಲಿ ಸಂಸದೆ ಮಹುವಾ ಮೊಯಿತ್ರಾ ಅವರು ನೀಡಿದ ಹೇಳಿಕೆ ಆಕ್ಷೇಪಾರ್ಹ ಮತ್ತು ಸಂವಿಧಾನಬಾಹಿರವಾಗಿದೆ. 1971ರಲ್ಲಿ ಯುದ್ಧದಲ್ಲಿ ರಾಯ್‌ಪುರದ ಮಾನಾ ಕ್ಯಾಂಪ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ನಿರಾಶ್ರಿತರು ನೆಲೆಸಿದ್ದಾರೆ. ಮಹುವಾ ಹೇಳಿಕೆಯು ನಿರಾಶ್ರಿತರಲ್ಲಿ ಭಯವನ್ನು ಸೃಷ್ಟಿಸಿದೆ. ಏಕೆಂದರೆ ಅಂತಹ ಹೇಳಿಕೆಗಳು ಇತರ ಸಮುದಾಯಗಳಿಂದ ಅವರ ವಿರುದ್ಧ ಕೋಪವನ್ನು ಉಂಟುಮಾಡಬಹುದು ದೂರಿನಲ್ಲಿ ಆರೋಪಿಸಲಾಗಿದೆ.

ಮಹುವಾ ಮೊಯಿತ್ರಾ ಹೇಳಿದ್ದೇನು?

ಗುರುವಾರ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಹುವಾ, ಗಡಿ ಭದ್ರತೆಯ ಜವಾಬ್ದಾರಿಗಳಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿದೆ. ಬಾಂಗ್ಲಾದಿಂದ ಒಳನುಸುಳುವಿಕೆಯನ್ನು ತಡೆಯಲು ಅಮಿತ್ ಶಾ ವಿಫಲವಾದರೆ, ನೀವು ಮೊದಲು ಮಾಡಬೇಕಾದ ಕೆಲಸ ಅಮಿತ್ ಶಾ ಅವರ ತಲೆಯನ್ನು ಕತ್ತರಿಸಿ ನಿಮ್ಮ ಮೇಜಿನ ಮೇಲೆ ಇಡುವುದು ಎಂದು ನೀಡಿದ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net