

ಸೊರಬ: ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಬಗ್ಗುಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ ಎಂದು ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾಪಂ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಛಲವಾದಿ ಸಮಾಜದಿಂದ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಗೃಹಿಣಿಯಾಗಿದ್ದ ಓಬವ್ವ ತನ್ನ ಸಾಹಸ ಮತ್ತು ಧೈರ್ಯದ ಮೂಲಕ ಒನಕೆ ಹಿಡಿದು ಶತ್ರು ಸೈನಿಕರನ್ನು ಸೆದೆಬಡಿದರು. ಇದು ದೇಶದ ಚರಿತ್ರೆಯ ಪುಟದಲ್ಲಿ ದಾಖಲಾಗಿದೆ. ಶತ್ರುಗಳ ಎದುರು ಉಗ್ರವಾಗಿ ಹೋರಾಡಿ ಧೈರ್ಯವನ್ನು ತೋರಿದರು. ಒನಕೆ ಓಬವ್ವನ ಧೈರ್ಯ ಮತ್ತು ಸಾಹಸ ಈಗಿನ ಮಹಿಳೆಯರಿಗೆ ಮಾದರಿಯಾಗಿದೆ ಎಂದರು.
ತಾಲೂಕು ಛಲವಾದಿ ಸಮಾಜದ ಮಂಜಪ್ಪ ಹಸವಿ ಮಾತನಾಡಿ, ವೀರವನಿತೆ ಒನಕೆ ಓಬವ್ವ ಅವರ ಕುರಿತು ಸಮಾಜ ಅರಿತುಕೊಳ್ಳುವುದು ಸಾಕಷ್ಟಿದೆ. ಓಬವ್ವ ಇಡೀ ದೇಶಕ್ಕೆ ಮಾದರಿಯಾದ ದಿಟ್ಟ ಮಹಿಳೆ. ಅವರ ಧೈರ್ಯ, ಸಾಹಸ ಮತ್ತು ಆದರ್ಶಗಳನ್ನು ಮಹಿಳೆಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಒನಕೆ ಓಬವ್ವ ಅವರ ಜೀವನ ಮತ್ತು ಸಾಹಸದ ಕುರಿತು ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಉಪನ್ಯಾಸ ನೀಡಿದರು. ಛಲವಾದಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಲೂಕು ಕಚೇರಿಯ ಶಿರಸ್ತೇದಾರ್ ಎಸ್.ನಿರ್ಮಲಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ್, ಡಿಎಸ್‌ಎಸ್ ವಿಭಾಗೀಯ ಸಂಚಾಲಕ ಗುರುರಾಜ್, ಪ್ರಮುಖರಾದ ಶ್ಯಾಮಣ್ಣ, ಬಲೀಂದ್ರಪ್ಪ, ನಾಗರತ್ನಾ, ವಿಕ್ರಂ ಹೆಬ್ದಾರ್, ಬಿ.ಜೆ.ವಿನೋದ್, ಸುರೇಶ್, ಬಿ.ಜೆ.ವಿನೋದ್, ಎಸ್.ರಾಘವೇಂದ್ರ ಇತರರಿದ್ದರು.