ಪ್ರಾಥಮಿಕ ಹಂತದಲ್ಲೇ ಕ್ರೀಡಾಸಕ್ತಿ ಪೋಷಿಸಿ

tth sports (1)
ಆರಗದಲ್ಲಿ ಆಯೋಜಿಸಿದ್ದ ತೀರ್ಥಹಳ್ಳಿ ತಾಲೂಕು ಮತ್ತು ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಂದ ಶಾಸಕ ಆರಗ ಜ್ಞಾನೇಂದ್ರ ಕ್ರೀಡಾಜ್ಯೋತಿ ಸ್ವೀಕರಿಸಿದರು. ವೈ.ಗಣೇಶ್, ಎನ್.ಎನ್.ಚಂದ್ರಶೇಖರ್, ರೇವತಿ, ಮಹೇಶ್, ಜಗದೀಶ್ ಇತರರಿದ್ದರು.
Published on

ತೀರ್ಥಹಳ್ಳಿ: ಒಲಿಂಪಿಕ್ಸ್ ಸೇರಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡುವ ಗುರಿಯನ್ನು ಪ್ರಾಥಮಿಕ ಶಾಲಾ ಹಂತದಲ್ಲೇ ಇಟ್ಟುಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಆರಗ ಸರ್ಕಾರಿ ಪ್ರೌಢಶಾಲಾ ವಿಭಾಗದ ಆಶ್ರಯದಲ್ಲಿ ಮಂಗಳವಾರ ಆರಂವಾದ ಎರಡು ದಿನಗಳ ತಾಲೂಕು ಮತ್ತು ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಎಡೆಬಿಡದೆ ಸುರಿಯುವ ಮಳೆಯ ನಡುವೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನಡುವೆ ಮಲೆನಾಡು ಭಾಗದ ಕ್ರೀಡಾಪಟುಗಳ ಸಾಧನೆ ಗಮನಾರ್ಹ ಎಂದರು.
ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸೂಕ್ತ ತರಬೇತಿ ಅಗತ್ಯ. ನಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊರತೆ ಕಾರಣದಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಆಗಿಲ್ಲ. ಪಶ್ಚಿಮಘಟ್ಟ ವ್ಯಾಪ್ತಿಯ ಮಕ್ಕಳ ಕ್ರೀಡಾ ಸಾಮರ್ಥ್ಯ ಪ್ರದರ್ಶನಕ್ಕೆ ಹವಾಮಾನವೂ ಪೂರಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ನಡುವೆಯೂ ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಶಾಲೆಯನ್ನು ಉಳಿಸಿಕೊಳ್ಳಲು ಊರಿನ ಪ್ರಮುಖರು ಮತ್ತು ದಾನಿಗಳ ಬೆಂಬಲ ಅನುಕರಣೀಯ. ಒಂದು ಕಾಲದಲ್ಲಿ ಬೇಡುವ ಸ್ಥಿತಿಯಲ್ಲಿದ್ದ ಈ ಊರಿನ ಕೈಗಳು ಇಂದು ದಾನ ಮಾಡುವ ಕೈಗಳಾಗಿ ಬದಲಾಗಿವೆ. ಇಲ್ಲಿ ಶೀಘ್ರವೇ ಪಬ್ಲಿಕ್ ಶಾಲೆ ಆರಂಭಿಸಲು ಪ್ರಯತ್ನಿಸುವೆ ಎಂದರು.
ಬಿಇಒ ವೈ.ಗಣೇಶ್ ಮಾತನಾಡಿ, ಮಳೆಗಾಲದ ಪ್ರತಿಕೂಲ ವಾತಾವರಣದ ನಡುವೆಯೂ ತಾಲೂಕು ಮಟ್ಟದ ಕ್ರೀಡಾಕೂಟ ಹೇಗಿರಬೇಕು ಎಂಬುದಕ್ಕೆ ಈ ಕ್ರೀಡಾಕೂಟ ಮಾದರಿ. ಇದಕ್ಕೆ ಹಳೇ ವಿದ್ಯಾರ್ಥಿ ಸಂಘಟನೆ, ಶಾಲೆಯ ಸಿಬ್ಬಂದಿ ಮತ್ತು ದಾನಿಗಳ ಶ್ರಮ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರಗ ಗ್ರಾಪಂ ಅಧ್ಯಕ್ಷ ಎನ್.ಎನ್.ಚಂದ್ರಶೇಖರ್, ಉಪಾಧ್ಯಕ್ಷೆ ರೇವತಿ ಗಣೇಶ್, ಸದಸ್ಯರಾದ ಮಹೇಶ್, ಮಾಜಿ ಅಧ್ಯಕ್ಷ ಜಗದೀಶ್, ರಾಜಶೇಖರ್, ಶಿಕ್ಷಕ ಕೆ.ಎನ್.ದಾನೇಶ್, ಹಿರಿಯ ವಿದ್ಯಾರ್ಥಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net