

ಮುಂಬೈ: ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಿದ ಮುಂಬೈನ ಖಾಸಗಿ ಆಸ್ಪತ್ರೆಯ 26 ದಾದಿಯರು ಹಾಗೂ ಮೂವರು ವೈದ್ಯರು ಸೋಂಕಿಗೆ ಒಳಗಾಗಿದ್ದಾರೆ.
ಕರ್ನಾಟಕದಲ್ಲಿ ಕರೊನಾದಿಂದಾಗಿ ಮೃತಪಟ್ಟ ಕಲಬುರಗಿಯ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಸೋಂಕು ತಗುಲಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕರೊನಾ ಸೋಂಕಿತರಿಗೆಂದೇ ರೂಪಿಸಲಾಗಿರುವ ವಿಶೇಷ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮನೆಗೆ ಹೋಗಲು ಹಿಂಜರಿಯುತ್ತಿದ್ದಾರೆ.
ಇವೆಲ್ಲವೂ ಬಿಡಿ ಬಿಡಿ ಘಟನೆಗಳೆನಿಸಿದರೂ ಕರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟಿರುವುದು ಇದರಿಂದ ವೇದ್ಯವಾಗುತ್ತದೆ. ಇದಕ್ಕೆ ಪ್ರತಿಯಾಗಿ ಈ ಕರೊನಾ ವಾರಿಯರ್ಸ್ಗಳು ಅನುಭವಿಸುತ್ತಿರುವುದೇನು ಗೊತ್ತೆ? ಇಲ್ಲಿವೆ ಕೆಲ ನಿದರ್ಶನಗಳು.
ದಾದಿಯೊಬ್ಬರಿಗೆ ಗ್ರಾಮಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ ಘಟನೆ ಮಂಗಳೂರಿನ ಕೊಣಾಜೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಅಷ್ಟಕ್ಕೂ ಆಕೆ ಮಾಡಿದ ಕೆಲಸವೆಂದರೆ, ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದ 10 ತಿಂಗಳ ಮಗುವಿನ ಆರೈಕೆ. ಬೆಂಗಳೂರಿನ ಹೆಗಡೆನಗರದ ಸಾರಾಯಿಪಾಳ್ಯದಲ್ಲಿ ಕರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ತೆರಳಿದ್ದ ಆಶಾ ಕಾರ್ಯಕರ್ತೆಗೆ ಜನರ ಗುಂಪು ಬೆನ್ನತ್ತಿ ಹಲ್ಲೆ ನಡೆಸಿತ್ತು. ಇನ್ನು, ದೇಶದ ಕರೊನಾ ಹಾಟ್ಸ್ಪಾಟ್ ಆಗಿರುವ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರು ವೈದ್ಯರು ದಾದಿಯರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ.
ದೇಶದ ರಕ್ಷಣೆ ಗಡಿಯಲ್ಲಿ ಹೋರಾಡುವುದಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತ, ಆರೈಕೆ ಮಾಡುವುದು ಕೂಡ ಆಗಿದೆ ಎಂಬುದನ್ನು ಕರೊನಾ ವಾರಿಯರ್ಸ್ ತೋರಿಸಿಕೊಟ್ಟಿದ್ದಾರೆ. ಆದರೆ, ಸೋಂಕಿಗೆ ಒಳಗಾಗುವ ಎಲ್ಲ ಸಾಧ್ಯತೆಗಳಿದ್ದರೂ, ಆದಷ್ಟೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸೇವೆಯಲ್ಲಿ ನಿರತರಾಗಿದ್ದಾರೆ. ಆದರೆ, ಅವರನ್ನು ಕಾಡುತ್ತಿರುವ ಅಂಶವೆಂದರೆ ರೋಗಿಗಳು, ಅವರ ಕುಟುಂಬದವರು ಮತ್ತು ಸಾರ್ವಜನಿಕರಿಂದ ನಿಂದನೆ, ದೂಷಣೆಗೆ ಒಳಗಾಗುತ್ತಿರುವುದು.
ಇದು ಭಾರತದಷ್ಟೇ ಸಮಸ್ಯೆಯಲ್ಲ, ಜಾಗತಿಕವಾಗಿ ಕರೊನಾ ವಿರುದ್ಧ ಮುಂಚೂಣಿ ಪಡೆಗಳು ಎದುರಿಸುತ್ತಿರುವ ಸಂಕಷ್ಟ. ನಮ್ಮ ದೇಶದಲ್ಲಿ ತಬ್ಲಿಘಿಗಳ ಮಾಡಿದ ಅವಾಂತರ ಸ್ಪಷ್ಟ ನಿದರ್ಶನ. ಆಸ್ಪತ್ರೆ ವಾರ್ಡ್ನಲ್ಲಿ ರೋಗಿಗಳು ದಾದಿಯರನ್ನು ನಿಂದಿಸುತ್ತಿದ್ದಾರೆ. ರೋಗ ಹರಡುವವರು ನೀವೇ ಎಂದು ಹೀಯಾಳಿಸುತ್ತಿದ್ದಾರೆ. ಜನಾಂಗೀಯ ದೂಷಣೆಗೂ ಇವರು ಗುರಿಯಾಗುತ್ತಿದ್ದಾರೆ.
ಬ್ರಿಟನ್ನಿನ ರಾಯಲ್ ಕಾಲೇಜ್ ಆಫ್ ನರ್ಸಿಂಗ್ನ ನಿರ್ದೇಶಕಿ ಸೂಸನ್ ಮಾಸ್ಟರ್ಸ್ ದಾದಿಯರು ಅನುಭವಿಸುತ್ತಿರುವ ಸಂಕಷ್ಟವನ್ನು ತೆರೆದಿಟ್ಟಿದ್ದಾರೆ. ಶುಶ್ರೂಷಕರನ್ನು ಸಾರ್ವಜನಿಕವಾಗಿ ನಿಂದಿಸಲಾಗುತ್ತಿದೆ. ಅವರ ಮೇಲೆ ಹಲ್ಲೆಗಳು ನಡೆಯುತ್ತಿವೆ. ತಮ್ಮನ್ನು ತಾವೇ ಬೆಂಕಿಗೊಡ್ಡಿಕೊಂಡು ನರ್ಸ್ಗಳು ರೋಗಿಗಳಿಗೆ ಆರೈಕೆ ನೀಡುತ್ತಿದ್ದಾರೆ. ಇಂಥವರ ಮೇಲಿನ ದೌರ್ಜನ್ಯ ಕೊನೆಗಾಣಬೇಕು ಎಂದಿದ್ದಾರೆ. ಇಂಗ್ಲೆಂಡ್ನ ಚೀಫ್ ನರ್ಸ್ ಆಫೀಸರ್ ರುತ್ ಮೇ ಕೂಡ ಈ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ವೈರಸ್ ಕೊನೆಗಾಣುತ್ತೆ ಆದರೆ, ಮನಸ್ಥಿತಿ ಶಾಶ್ವತ: ಇನ್ನೊಬ್ಬ ನರ್ಸ್ ರೆಜಿಲ್ ತನ್ನ ಮೇಲಾದ ದೌರ್ಜನ್ಯವನ್ನು ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ. ವಾರ್ಡ್ನಲ್ಲಿ ರೋಗಿಯೊಬ್ಬ ತನ್ನನ್ನು ತಿವಿದಿದ್ದಲ್ಲದೇ, ಅವಾಚ್ಯವಾಗಿ ಮಾತನಾಡಿದ್ದ. ಇದಕ್ಕೆ ಆತನ ಪ್ರೇಯಸಿ ಕೂಡ ಸಾಥ್ ನೀಡಿದ್ದಳು. ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ನೋವು ತೋಡಿಕೊಂಡಿದ್ದಾಳೆ. ಕೆಲ ತಿಂಗಳಲ್ಲಿ ಈ ವೈರಸ್ ಕೊನೆಗಾಣಬಹುದು. ಆದರೆ, ನಮ್ಮನ್ನು ನಿಂದಿಸುವ, ಹಲ್ಲೆ ಮಾಡುವ, ಜನಾಂಗೀಯವಾಗಿ ತಾರತಮ್ಯ ಮಾಡುವ ಮನಸ್ಥಿತಿ ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎಂದು ಕಂಬನಿ ಮಿಡಿದಿದ್ದಾಳೆ. ಇದನ್ನು 20 ಸಾವಿರಕ್ಕೂ ಅಧಿಕ ಜನರು ಶೇರ್ ಮಾಡಿ ಆಕೆಗೆ ಸಾಂತ್ವನ ಹೇಳಿದ್ದಾರೆ.