

ಹಾವೇರಿ: ಇಂದು ಹಾವೇರಿಯ ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೊಸ ಬಾಂಬ್ ಸಿಡಿಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು, ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿರುವುದು 100ಕ್ಕೆ 100ರಷ್ಟು ಸತ್ಯ ಎಂದು ಹೇಳಿದ್ದಾರೆ.
"ನಮ್ಮಲ್ಲಿನ 9 ಜನರನ್ನು ಅವರು ಸಂಪರ್ಕಿಸಿರುವುದಾಗಿ ಸಿಎಂ ಹಾಗೂ ಡಿಸಿಎಂಗೆ ಶಾಸಕರು ಹೇಳಿದ್ದಾರೆ. ಟಚ್ ಮಾಡಿದ್ದಾರೆ, ಕೇಳಿದ್ದಾರೆ ಎಂದು ನಮ್ಮ ಒಂಭತ್ತು ಶಾಸಕರೇ ಖುದ್ದಾಗಿ ಹೇಳಿದ್ದಾರೆ. ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿರುವುದು 100% ಸತ್ಯ. ಇದರಲ್ಲಿ ಯಾವ ಅನುಮಾನವೇ ಇಲ್ಲ" ಎಂದರು. ಪ್ರತಿ ಮಾತಿನಲ್ಲೂ ಬಿಜೆಪಿ, ಜೆಡಿಎಸ್ ನಾಯಕರಿಗೆ ಟಕ್ಕರ್ ಕೊಟ್ಟ ಸಚಿವರು, ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದ ವೇಳೆ ಈ ರೀತಿ ಹೇಳಿದ್ದಾರೆ.
ಸಿಎಂ ಕುರ್ಚಿ ವಿಚಾರ:
"ಸಿಎಂ ಕುರ್ಚಿ ಬಗ್ಗೆ ಮಾತಾಡೋರು ನಮ್ಮ ಪಾರ್ಟಿಯಲ್ಲಿ ಇಲ್ಲ. ನಮ್ಮ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಇದೆ. ಹೈಕಮಾಂಡ್ ಹಾಗೂ ಸಚಿವರು ಕೂಡ ಸಿದ್ದರಾಮಯ್ಯ ಹಾಗೂ ಡಿಕೆಶಿ ಪರವೇ ಇದೆ" ಎಂದರು.
ನಮ್ಮವರೇ ನಮಗೆ ಹಾಕಿಕೊಡ್ತಾರೆ ಎಂಬ ಸಿಎಂ ಹೇಳಿಕೆ:
"ಈ ಹೇಳಿಕೆಯನ್ನು ಸಿಎಂ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಮಗೆ ಮತ್ತು ನಮ್ಮ ಹೈಕಮಾಂಡ್ಗೆ ಹಾಗೂ ಜನರಿಗೆ ಸಿದ್ದರಾಮಯ್ಯ ನಾಯಕತ್ವ ಮುಂದುವರೆಯಬೇಕು ಎಂಬ ಸ್ಪಷ್ಟತೆ ಇದೆ. ಐದು ವರ್ಷವು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ಯಾರು ಕಾಂಗ್ರೆಸ್ ಸರ್ಕಾರ ಅಲ್ಲಾಡಿಸೋಕೆ ಸಾಧ್ಯವೇ ಇಲ್ಲ. ಲೋಕಸಬಾ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದಕ್ಕೆ ಪ್ರಧಾನಿಗೆ, ಅಮಿತ್ ಷಾ ಅವರಿಗೆ ಆತಂಕ ಶುರುವಾಗಿದೆ" ಎಂದರು.
"ಚುನಾವಣೆ ಬಳಿಕ ಮೋದಿಯವರ 8% ಪ್ರಭಾವ ಕಡಿಮೆಯಾಗಿದೆ. ರಾಹುಲ್ ಗಾಂಧಿಯ ಪ್ರಭಾವ 22% ಹೆಚ್ಚಾಗಿದೆ. ಬಿಜೆಪಿಯವರಿಗಿಂತ ಜೆಡಿಎಸ್ನವರಿಗೆ ಹೆಚ್ಚಿನ ರೀತಿಯಲ್ಲಿ ಆತಂಕ ಶುರುವಾಗಿದೆ. ಜನರು ಕಾಂಗ್ರೆಸ್ ಪರವಾಗಿ ಇದ್ದಾರೆ. ಇದನ್ನು ಹಾಳು ಮಾಡಬೇಕು ಎನ್ನುವುದೇ ಇವರ ಉದ್ದೇಶ" ಎಂದು ಜೆಡಿಎಸ್ ನಾಯಕರನ್ನು ಗುರಿಯಾಗಿಸಿ ಟೀಕಿಸಿದರು.