ಕ್ಯಾರವಾನ್​​ನಲ್ಲಿ ಬಟ್ಟೆ ಮಾತ್ರ ಬದಲಿಸಲ್ಲ ಅದು ಕೂಡ ನಡೆಯುತ್ತೆ! ಸ್ಫೋಟಕ ಸಂಗತಿ ಬಿಚ್ಚಿಟ್ಟ ಶಕೀಲಾ

Shakeela
Published on

ತಿರುವನಂತಪುರಂ: ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿರುವ ವರದಿ, ಕೇರಳ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಭಾರಿ ಸಂಚಲನ ಮೂಡಿಸಿದೆ. ಈ ವರದಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸ್ಟಾರ್ ನಟಿಯರು ಕೂಡ ಚಿತ್ರರಂಗದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ನಟಿ ಶಕೀಲಾ ಅವರು ಆಘಾತಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಶಕೀಲಾ ಅವರು ಶೂಟಿಂಗ್​ ಸೆಟ್‌ಗಳಲ್ಲಿ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು. ಸಿನಿ ಉದ್ಯಮದಲ್ಲಿನ ಕೆಲವು ಸವಾಲುಗಳು ಮತ್ತು ತೆರೆಮರೆಯಲ್ಲಿ ನಡೆಯುವ ವಾಸ್ತವ ಸಂಗತಿಗಳನ್ನು ಬಹಿರಂಗಪಡಿಸಿದರು. ಶೂಟಿಂಗ್​ ಸೆಟ್‌ನಲ್ಲಿ ಬಟ್ಟೆಗಳನ್ನು ಬದಲಾಯಿಸುವುದು ಸುಲಭವಾಗಿದ್ದರೂ ದೂರದ ಸ್ಥಳಗಳಲ್ಲಿ ಶೂಟಿಂಗ್ ಮಾಡುವಾಗ ಬಟ್ಟೆ ಬದಲಾಯಿಸುವುದೇ ಒಂದು ದೊಡ್ಡ ಸವಾಲು ಎಂದರು.

ಕಲಾವಿದರಿಗೆ ಈಗ ವಿಶೇಷವಾಗಿ ಕ್ಯಾರವಾನ್‌ಗಳಿವೆ. ಆದರೆ, ಕ್ಯಾರವಾನ್‌ಗಳನ್ನು ಬಟ್ಟೆ ಬದಲಾಯಿಸಲು ಮಾತ್ರ ಬಳಸುತ್ತಾರೆಯೇ? ಎಂದು ಪ್ರಶ್ನಿಸಿದ ಶಕೀಲಾ, ಕ್ಯಾರವಾನ್​ ಒಳಗೆ ಬೇರೇನೋ ನಡೆಯುತ್ತದೆ. ಊಟ, ಮೋಜು-ಮಸ್ತಿ ಮತ್ತು ಸೆಕ್ಸ್ ಎಲ್ಲವೂ ಅಲ್ಲಿ ನಡೆಯುತ್ತದೆ. ನಾನು ಕಣ್ಣಾರೆ ಅದನ್ನು ನೋಡಿಲ್ಲ, ಆದರೆ ನಾನು ಅದರ ಬಗ್ಗೆ ಸಾಕಷ್ಟು ಮಂದಿಯಿಂದ ಕೇಳಿದ್ದೇನೆ ಎಂದು ಶಕೀಲಾ ತಿಳಿಸಿದರು.

ಇದೇ ಸಮಯದಲ್ಲಿ ಶಕೀಲಾ ಅವರು ತಮ್ಮ ವೃತ್ತಿಜೀವನದಲ್ಲಿ ತಪ್ಪಿದ ಅವಕಾಶಗಳ ಬಗ್ಗೆಯೂ ಮಾತನಾಡಿದರು. ಶಕೀಲಾ ಅವರು ಮದರ್ ತೆರೇಸಾಗೆ ಹೋಲುವ ಪಾತ್ರ ಮಾಡಿದ್ದನ್ನು ನೆನಪಿಸಿಕೊಂಡರು. ಇದೀಗ 15 ವರ್ಷಗಳೇ ಕಳೆದಿವೆ. ಆದರೂ ಅವರಿನ್ನೂ ಆ ಸಿನಿಮಾವನ್ನು ಬಿಡುಗಡೆ ಮಾಡಿಲ್ಲ. ಆ ಸಿನಿಮಾವನ್ನು ಬಿಡುಗಡೆ ಮಾಡದಂತೆ ನಾನು ಕೂಡ ನಿರ್ದೇಶಕರಲ್ಲಿ ಮನವಿ ಮಾಡಿದ್ದೇನೆ. ನನ್ನ ಕಣ್ಣಿನಲ್ಲಿ ಲೈಂಗಿಕತೆ ಕಾಣುವುದಿಲ್ಲ, ಬದಲಾಗಿ ಕರುಣೆ ಕಾಣುತ್ತದೆ ಎಂದು ಹೇಳಿದಕ್ಕೆ ಆ ಸಿನಿಮಾವನ್ನು ಮಾಡಿದ್ದೆ. ಆದರೆ, ಆ ಸಿನಿಮಾವನ್ನು ಬಿಡುಗಡೆ ಮಾಡಲಿಲ್ಲ ಎಂದರು.

ನಟಿ ರೂಪಶ್ರೀ ಅವರ ಮನೆ ಬಾಗಿಲನ್ನು ಈ ಹಿಂದೆ ನಟನೊಬ್ಬ ತಟ್ಟಿದ್ದನ್ನು ನೋಡಿ ಆತಂಕಗೊಂಡ ಘಟನೆಯನ್ನು ಇದೇ ಸಂದರ್ಭದಲ್ಲಿ ಶಕೀಲಾ ನೆನೆದರು. ಈ ಘಟನೆ ನಡೆದಾಗ ರೂಪಶ್ರೀಗೆ ಸಹಾಯ ಕೂಡ ಮಾಡಿದ್ದೆ. ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳಿದರು.

ಇನ್ನು ಮಲಯಾಳಂ ಚಿತ್ರರಂಗದಲ್ಲಿ ಯಾವಾಗಲೂ ಪವರ್ ಗ್ರೂಪ್ ಇದ್ದೇ ಇದೆ. ಆ ಪವರ್​ ಗ್ರೂಪ್​ ಇನ್ನೂ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಆ ಗುಂಪಿನಲ್ಲಿ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಹೊರತುಪಡಿಸಿ ಬೇರೆ ಯಾರಿದ್ದಾರೆ? ಮುಖೇಶ್ ಮತ್ತು ಇತರರು ಸಹ ಇದ್ದಾರೆ. ಆದರೆ, ಮುಖ್ಯವಾದವರು ಯಾರೆಂದರೆ, ಮೋಹನ್ ಲಾಲ್ ಮತ್ತು ಮಮ್ಮುಟ್ಟಿ, ಎಂದು ಶಕೀಲಾ ಟೀಕಿಸಿದರು.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net