ಅದ್ಧೂರಿಯಾಗಿ ನಡೆಯಿತು ಅಟ್ಲಾಂಟದ ನೃಪತುಂಗ ಕನ್ನಡ ಕೂಟದ 50ನೇ ವಾರ್ಷಿಕೋತ್ಸವ

Kannada Koota
Published on

ಜಾರ್ಜಿಯಾ: ಯುಎಸ್​​ನ ಜಾರ್ಜಿಯಾದ ಅಟ್ಲಾಂಟದಲ್ಲಿರುವ ನೃಪತುಂಗ ಕನ್ನಡ ಕೂಟದ 50ನೇ ವಾರ್ಷಿಕೋತ್ಸವವು ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು.

ಈ ಸಮಾರಂಭದಲ್ಲಿ ನಟರಾದ ಸಿಹಿಕಹಿ ಚಂದ್ರು, ಶ್ರೀನಾಥ್ ವಶಿಷ್ಠ, ನಮಿತಾ ರಾವ್, ವಿಕ್ರಮ್ ಸೂರಿ ಹಾಗೂ ನೃತ್ಯಗಾರರಾದ ನಿರುಪಮಾ, ರಾಜೇಂದ್ರ ಮತ್ತು ಯಕ್ಷಗಾನ ಕಲಾವಿದರಾದ ನವೀನ್, ಆದಿತ್ಯ, ಜಾದೂಗಾರ ಆಶಿಕ್ ಪ್ರಕಾಶ್ ಅವರು ವೈವಿಧ್ಯಮಯ ಕಾರ್ಯಕ್ರಮಗಳಿಂದ ರಂಜಿಸಿದರು.

ವಿಕ್ರಮ್ ಸೂರಿ ಹಾಗೂ ನಮಿತಾ ರಾವ್ ಪ್ರಸ್ತುತ ಪಡಿಸಿದ ಹಾಸ್ಯ ನಾಟಕ "ಲಾಕೌಟ್ ಅಲ್ಲ ನಾಕೌಟ್" ಜನರನ್ನು ಹಾಸ್ಯಗಡಲಲ್ಲಿ ತೇಲಿಸಿತು. "ಪುಣ್ಯ ಕೋಟಿ" ಗೀತರೂಪಕದ ಮೂಲಕ ಇವರು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿ ರಂಗಗೀತೆಗಳೊಂದಿಗೆ ಜನರನ್ನು ಆಕರ್ಷಿಸಿದರು.

ಅಟ್ಲಾಂಟದ ಸ್ಥಳೀಯ ಕಲಾವಿದರಿಂದ ನೃತ್ಯ, ಜಾನಪದ ಗಾಯನ ಹಾಗೂ ಚಿಣ್ಣರಿಂದ ಕನ್ನಡದ ದೇಶ ಭಕ್ತಿ ಗಾಯನ ಪ್ರಸ್ತುತ ಪಡಿಸಲಾಯಿತು. ಎರಡು ದಿನವೂ ಕನ್ನಡಿಗರಿಗೆ ರುಚಿಕರವಾದ ಭರ್ಜರಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

"ಚಿಗುರು" ಸ್ಮರಣ ಸಂಚಿಕೆಯನ್ನು ಈ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ವಿಶೇಷವಾಗಿ ಸಿಂಗರಿಸಿದ್ದ ಕನ್ನಡ ರಥವನ್ನು ಕೊಡಗು, ಕಲ್ಯಾಣ ಕರ್ನಾಟಕ, ಬಯಲುಸೀಮೆ ಮತ್ತು ಕರಾವಳಿ ಶೈಲಿಯ ವೇಷಭೂಷಣ ಧರಿಸಿದ್ದ ಕನ್ನಡಿಗರು ತಮಟೆ, ಕಂಸಾಳೆ ವಾದ್ಯ, ನೃತ್ಯದ ಮೂಲಕ ಮೆರವಣಿಗೆ ಮಾಡಿದರು.

ಸಂಘದ ಪ್ರಸ್ತುತ ನಿರ್ದೇಶಕ ಮಂಡಳಿ ಅಧ್ಯಕ್ಷ ಸಂತೋಷ್ ಕೃಷ್ಣಮೂರ್ತಿ, ಮಂಗಳ ಉಡುಪ ಹಾಗೂ ಟ್ರಸ್ಟೀಗಳು, ಮಂಡಳಿಯ ನಿರ್ದೇಶಕರು, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಟ್ಲಾಂಟ ನೃಪತುಂಗ ಕನ್ನಡ ಕೂಟವು 1973ರಲ್ಲಿ ಸ್ಥಾಪನೆಯಾಗಿದ್ದು, 50 ವರ್ಷಗಳನ್ನು ಪೂರೈಸಿದೆ. ಜಾರ್ಜಿಯಾ ರಾಜ್ಯದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಇದು ಸ್ಥಳೀಯ ಅನಿವಾಸಿ ಕನ್ನಡಿಗರ ಕೊಂಡಿಯಾಗಿದೆ. 2022ರಲ್ಲಿ ನಿಧನರಾದ ಇದರ ಸ್ಥಾಪಕ ಹೊನ್ನವಳ್ಳಿ ರಾಮಸ್ವಾಮಿಯವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net