

ನವದೆಹಲಿ: ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸಬೇಕು ಎಂಬ ಬೇಡಿಕೆಗಳ ನಡುವೆ ಕೇಂದ್ರದ ಎನ್ಡಿಎ ಸರ್ಕಾರ, ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕನಿಷ್ಠ ಪಿಂಚಣಿ ಒದಗಿಸುವ ಗುರಿ ಹೊಂದಿರುವ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಅನುಮೋದನೆ ನೀಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಪ್ರಸಾರ ಮತ್ತು ಮಾಹಿತಿ ಖಾತೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಸಂಪುಟ ಏಕೀಕೃತ ಪಿಂಚಣಿ ಯೋಜನೆಯನ್ನು ಅನುಮೋದಿಸಿದೆ. ಮೊದಲನೆಯದಾಗಿ ಶೇ.50ರಷ್ಟು ಖಚಿತ ಪಿಂಚಣಿ, ಎರಡನೆಯದಾಗಿ ಕುಟುಂಬ ಪಿಂಚಣಿಯನ್ನು ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಖಾತರಿಪಡಿಸುತ್ತಿದೆ. ಈ ಯೋಜನೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರದ ನೌಕರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರಗಳೂ ಕೂಡ ಈ ಯೋಜನೆ ಜಾರಿಗೊಳಿಸಿದರೆ, ಸುಮಾರು 90 ಲಕ್ಷ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಅಥವಾ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಮಧ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಜ್ಯ ಸರ್ಕಾರಗಳು ಏಕೀಕೃತ ಪಿಂಚಣಿ ಯೋಜನೆ ಅಳವಡಿಕೊಳ್ಳುವ ಬಗ್ಗೆ ತೀರ್ಮಾನ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕರ್ನಾಟಕದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡಬೇಕು ಎಂದು ಸರ್ಕಾರಿ ನೌಕರರ ಸಂಘಗಳು ಸಿಎಂ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಿವೆ. ಈಗ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿ ಮಾಡಲು ಮುಂದಾಗಿರುವುದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹೊಸ ಮಾದರಿ ಅಳವಡಿಸಲು ಮುಂದಾಗುವುದೇ ಎಂಬ ಕುತೂಹಲ ಹೆಚ್ಚಿದೆ.
ರಾಷ್ಟ್ರೀಯ ಪ್ರಗತಿಗೆ ಗಣನೀಯ ಕೊಡುಗೆ ನೀಡುವ ಎಲ್ಲಾ ಸರ್ಕಾರಿ ನೌಕರರ ಶ್ರಮದ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಈ ಯೋಜನೆ ಸರ್ಕಾರಿ ನೌಕರರಿಗೆ ಘನತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಅವರ ಯೋಗಕ್ಷೇಮ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ
| ನರೇಂದ್ರ ಮೋದಿ ಪ್ರಧಾನಮಂತ್ರಿ
ಯುಪಿಎಸ್ನಿಂದ ಪೂರ್ಣ ಪ್ರಮಾಣದ ಪಿಂಚಣಿ ಸಿಗುವುದಿಲ್ಲ. ಡಿಎ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ಶೇ.50 ಮಾತ್ರ ಪರಿಹಾರ ಸಿಗುತ್ತದೆ. ಹೊಸ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆ ಜಾರಿ ತರಬೇಕು. ಇದರ ವಿರುದ್ಧ ಸರ್ಕಾರಿ ನೌಕರರು ಹೋರಾಟ ಮಾಡುತ್ತಾರೆ.
| ಸಿ.ಎಸ್. ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
ಯುಪಿಎಸ್ ರೂಪುಗೊಂಡ ಬಗೆ
ಎನ್ಪಿಎಸ್ ಕುರಿತಂತೆ ಸರ್ಕಾರಿ ನೌಕರರಲ್ಲಿ ಅನೇಕ ಆಕ್ಷೇಪಣೆಗಳಿದ್ದವು. ಹಲವು ನಿಯಮ ಬದಲಾವಣೆಗೆ ಒತ್ತಡವಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಆ ಸಮಿತಿ ಕೂಲಂಕಶ ಅಧ್ಯಯನ, ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ 100ಕ್ಕೂ ಅಧಿಕ ಸಭೆಗಳನ್ನುನಡೆಸಿತ್ತು. ಆರ್ಬಿಐ ಹಾಗೂ ವಿಶ್ವ ಬ್ಯಾಂಕ್ನಿಂದಲೂ ಸಲಹೆಗಳನ್ನು ಪಡೆದುಕೊಂಡು ಸಮಿತಿ ನೀಡಿದ ಸಮಗ್ರ ಶಿಫಾರಸು ಆಧರಿಸಿ ಏಕೀಕೃತ ಪಿಂಚಣಿ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಸರ್ಕಾರಿ ನೌಕರರಲ್ಲಿದ್ದ ಎಲ್ಲ ಆತಂಕ, ಆಕ್ಷೇಪಗಳನ್ನು ಪರಿಹರಿಸಿದೆ ಹಾಗೂ ಪಿಂಚಣಿ ವ್ಯವಸ್ಥೆಯ ದಕ್ಷತೆ ಹಾಗೂ ಪರಿಣಾಮಕಾರಿತ್ವವನ್ನು ಹೆಚ್ಚಿಸಲಿದೆ ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ.
ಏಕೀಕೃತ ಪಿಂಚಣಿ ಯೋಜನೆ 2025ರ ಏಪ್ರಿಲ್ 1ರಿಂದ ಜಾರಿಯಾಗಲಿದೆ. ಮೊದಲ ವರ್ಷದಲ್ಲಿ 6250 ಕೋಟಿ ರೂ. ಹಣವನ್ನು ಪಿಂಚಣಿಗಾಗಿ ಮೀಸಲಿಡಲು ತೀರ್ವನಿಸಲಾಗಿದೆ. 2004ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ನಿವೃತ್ತರಾದ ಎಲ್ಲರಿಗೂ ಏಕೀಕೃತ ಪಿಂಚಣಿ ಯೋಜನೆ ಅನ್ವಯವಾಗಲಿದೆ. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ಈ ಘೊಷಣೆ ಹೊರಬಿದ್ದಿದ್ದು, ರಾಜಕೀಯವಾಗಿ ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಲಾಭ ತಂದುಕೊಡುವ ನಿರೀಕ್ಷೆಯಿದೆ. ಆದಾಗ್ಯೂ, ಸರ್ಕಾರಿ ನೌಕರ ಸಂಘಗಳು ಈ ಯೋಜನೆಗೆ ಹೇಗೆ ಪ್ರತಿಕ್ರಿಯಿಸಲಿವೆ ಎನ್ನುವುದನ್ನೂ ಕಾದು ನೋಡಬೇಕಿದೆ.
BioE3 ನೀತಿ: ಜೈವಿಕ ತಂತ್ರಜ್ಞಾನ ಆಧಾರಿತ ಉತ್ಪಾದನೆಯನ್ನು ಉತ್ತೇಜಿಸುವ ಪ್ರಸ್ತಾವನೆ ಆಜಿಟಉ3 (ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ) ಎಂಬ ನೀತಿಯನ್ನು ಕೇಂದ್ರ ಸಚಿವ ಸಂಪುಟ ಒಪ್ಪಿದೆ. 1990ರ ದಶಕದಲ್ಲಿ ಐಟಿ ಉದ್ಯಮ ಕ್ರಾಂತಿ ಉಂಟುಮಾಡಿದಂತೆಯೇ ತಂತ್ರಜ್ಞಾನ ಕ್ರಾಂತಿಯ ವೇಗವರ್ಧನೆ ಮಾಡುವುದು ಯೋಜನೆ ಗುರಿಯಾಗಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಆದ್ಯತೆಗಳನ್ನು ಪರಿಹರಿಸಲು, ಆಜಿಟಉ3 ನೀತಿಯು ಕಾರ್ಯತಂತ್ರ/ವಿಷಯಾಧಾರಿತ ವಲಯಗಳ ಮೇಲೆ ಕೇಂದ್ರೀಕರಿಸುತ್ತದೆ. ಹೆಚ್ಚಿನ ಮೌಲ್ಯದ ಜೈವಿಕ-ಆಧಾರಿತ ರಾಸಾಯನಿಕಗಳು, ಬಯೋಪಾಲಿಮರ್ಗಳು ಮತ್ತು ಕಿಣ್ವಗಳು, ಸ್ಮಾರ್ಟ್ ಪೋ›ಟೀನ್ ಮತ್ತು ಆಹಾರಗಳು, ಬಯೋಥೆರಪಿಟಿಕ್ಸ್, ಹವಾಮಾನ ಸ್ಥಿತಿಸ್ಥಾಪಕ ಕೃಷಿ, ಕಾರ್ಬನ್ ಕ್ಯಾಪ್ಚರ್ ಮತ್ತು ಅದರ ಬಳಕೆ, ಸಾಗರ ಮತ್ತು ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿಕೆ ನೀಡಿದೆ.
ಕೇಂದ್ರದ ಹೊಸ ಪಿಂಚಣಿ ವ್ಯವಸ್ಥೆ ಸಂಪೂರ್ಣ ಗೊಂದಲಮಯವಾಗಿದೆ. ನೌಕರರ ಪಾಲಿಗೆ ಇದು ಅಪಾಯಕಾರಿಯಾದ ಯೋಜನೆಯಾಗಿದೆ. ಯುಪಿಎಸ್ ಸಹ ಮಾರುಕಟ್ಟೆ ಆಧಾರಿತ ಪಿಂಚಣಿ ಯೋಜನೆಯಾಗಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಸರ್ಕಾರ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದೊಂದೆ ಪರಿಹಾರ.
| ಶಾಂತರಾಮ ಅಧ್ಯಕ್ಷ, ಎನ್ಪಿಎಸ್ ನೌಕರರ ಸಂಘ