ಎನ್​ಪಿಎಸ್​​ನಿಂದ ಜೀವನ ಭದ್ರತೆ!

pension
Published on

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್) ಅನ್ವಯ ಸರ್ಕಾರಿ ಹಾಗೂ ಖಾಸಗಿ ನೌಕರರು ನಿವೃತ್ತಿ ಬಳಿಕ ಪಿಂಚಣಿ ಪಡೆಯುವ ಅವಧಿಯನ್ನು 70 ವರ್ಷದಿಂದ 75 ವರ್ಷಕ್ಕೆ ಹೆಚ್ಚಿಸಲಾಗಿದ್ದು, 2023-24ನೇ ಸಾಲಿನ ಅಂತ್ಯದೊಳಗೆ 1.3 ಕೋಟಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್​ಆರ್​ಡಿಎ) ಗುರಿ ಹೊಂದಿದೆ. ಇದೇ ವೇಳೆ ಎನ್​ಪಿಎಸ್ ಸದಸ್ಯರಿಗೆ ವಾರ್ಷಿಕ ಇಂತಿಷ್ಟು ಮೊತ್ತವನ್ನು ಗ್ಯಾರಂಟಿ ರಿಟರ್ನ್ಸ್ ರೂಪದಲ್ಲಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.

ಇದು ಸವಾಲಿನ ಕೆಲಸವಾಗಿದ್ದು, ಕೇಂದ್ರ ಸರ್ಕಾರವೇ ಪ್ರತ್ಯೇಕ ನಿಧಿ ನೀಡಿದರೆ ಅನುಷ್ಠಾನ ಸುಲಭ. ಈ ಚಿಂತನೆ ಜಾರಿಗೆ ಕಾಲಮಿತಿಯನ್ನು ನಿಗದಿ ಮಾಡಿಲ್ಲ. ಇದೇ ರೀತಿ ಸದಸ್ಯರು ಪಾವತಿಸುವ ಮಾಸಿಕ ವಂತಿಗೆ ಮೊತ್ತವನ್ನು ಹಾಲಿ ಶೇ.10ರಿಂದ ಶೇ.12ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಬಂದಿದೆ. ಇದರಿಂದ ನಿವೃತ್ತಿ ಬಳಿಕ ಇಡಿಗಂಟು ಮೊತ್ತ ತುಸು ಹೆಚ್ಚಾಗಲಿದೆ ಎಂಬ ಅಭಿಪ್ರಾಯ ಇದೆ. ಈ ವಿಚಾರದಲ್ಲಿ ಚರ್ಚೆ ನಡೆದಿದ್ದು, ಸರ್ಕಾರದ ತೀರ್ವನಕ್ಕೆ ಒಳಪಟ್ಟಿದೆ ಎಂದು ಪಿಎಫ್​ಆರ್​ಡಿಎ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಮೊಹಾಂತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್) ಆರಂಭವಾದಾಗಿನಿಂದ ಈವರೆಗೆ 7 ಕೋಟಿ ಸದಸ್ಯರು ನೋಂದಣಿಯಾಗಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದ ಆರಂಭದಿಂದ ಪಿಂಚಣಿ ಸೌಲಭ್ಯ ಮುಂದುವರಿಸುವ ಮಿತಿಯನ್ನು 75 ವರ್ಷಕ್ಕೆ ವಿಸ್ತರಿಸಲಾಗಿದೆ. ಇದರನ್ವಯ ಈವರೆಗೆ 1 ಕೋಟಿ ಸದಸ್ಯರು ನೋಂದಣಿಯಾಗಿದ್ದು, ಮಾರ್ಚ್ ಅಂತ್ಯಕ್ಕೆ ಇನ್ನುಳಿದ 30 ಲಕ್ಷ ಸದಸ್ಯರು ನೋಂದಣಿಯಾಗಲಿದ್ದಾರೆ ಎಂದು ತಿಳಿಸಿದರು.

ಎನ್​ಪಿಎಸ್ ಮೂಲಕ ಹೂಡಲಾದ ಹಣಕ್ಕೆ ವಾರ್ಷಿಕ ಶೇ.13.3 ಲಾಭಾಂಶ ಸಿಗುತ್ತಿದೆ. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಸದಸ್ಯರಿಗೆ ನಿಶ್ಚಿತ ಮೊತ್ತ ಸಿಗುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಲಾಭ ಸಿಗುವ ಖಾತ್ರಿಯೂ ಇದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಹೊಂದಿರುವ ಗುರಿಗೆ ಎದುರಾಗಿ ಈವರೆಗೆ 1 ಕೋಟಿ ಸದಸ್ಯರು ಸೇರ್ಪಡೆಯಾಗಿದ್ದಾರೆ. ಮುಂದಿನ 2-3 ವರ್ಷದಲ್ಲಿ ದುಪ್ಪಟ್ಟು ಸದಸ್ಯರನ್ನು ಹೊಂದುವ ಆಶಯ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಸ್ತುತ ಎನ್​ಪಿಎಸ್​ನಲ್ಲಿ 1.41 ಕೋಟಿ ಸಕ್ರಿಯ ಸದಸ್ಯರಿದ್ದಾರೆ. ಈ ಪೈಕಿ 91 ಲಕ್ಷ ಮಂದಿ ಸರ್ಕಾರಿ ನೌಕರರು ಹಾಗೂ 51 ಲಕ್ಷ ಮಂದಿ ಖಾಸಗಿ/ಕಾರ್ಪೆರೇಟ್ ವಲಯಕ್ಕೆ ಸೇರಿದವರಾಗಿದ್ದಾರೆ. ಅಟಲ್ ಪಿಂಚಣಿ ಯೋಜನೆಗೆ 5.30 ಕೋಟಿ ಮಂದಿ ಸದಸ್ಯರಾಗಿದ್ದು, ಒಟ್ಟಾರೆ ಎನ್​ಪಿಎಸ್ ನಿನಿಧಿಯ ಮೊತ್ತ 11 ಲಕ್ಷ ಕೋಟಿ ರೂ. ನಷ್ಟಿದೆ ಎಂದು ವಿವರಿಸಿದರು.

ಆಯ್ಕೆ ಸದಸ್ಯರ ತೀರ್ಮಾನ: ಹೊಸ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಆಯಾ ಸದಸ್ಯರ ವಿವೇಚನೆಗೆ ಬಿಡಲಾಗಿದ್ದು, ಮಾಸಿಕ ಪಿಂಚಣಿ ಮೊತ್ತದಲ್ಲಿ ಕಡಿಮೆಯಾಗದು. ಸದಸ್ಯರು ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿ ಸೇರಿದರೂ ಮೂಲ ಸದಸ್ಯತ್ವ ಹಾಗೆಯೇ ಮುಂದುವರಿಯಲಿದೆ. ನೌಕರಿ ಮಧ್ಯದಲ್ಲೇ ವಿದೇಶದಲ್ಲಿ ಕೆಲಸಕ್ಕೆ ಸೇರಿ ವಾಪಸ್ ಭಾರತಕ್ಕೆ ಮರಳಿದ ಬಳಿಕವೂ ನೌಕರನ ಮೂಲ ಸದಸ್ಯತ್ವ ರದ್ದಾಗದೆ ಮುಂದುವರಿಸಿಕೊಳ್ಳಬಹುದು. ಈ ರೀತಿಯ ವಿಶೇಷ ಸೌಲಭ್ಯವಿರುವುದರಿಂದ ಖಾಸಗಿ ಬ್ಯಾಂಕ್​ಗಳು, ಗ್ರಾಮೀಣ ಭಾಗದ ವಿತ್ತೀಯ ಸಾಂಸ್ಥಿಕ ಸಂಸ್ಥೆಗಳ ಕೆಲಸಗಾರರನ್ನು ಇಪಿಎಫ್​ಗೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ವಿಮಾ ಕ್ಷೇತ್ರದ ಪಾಲು ಜಿಡಿಪಿಯ ಶೇ.16.5: ದೇಶದಲ್ಲಿರುವ ಎಲ್ಲ ಬಗೆಯ ವಿಮೆ ಯೋಜನೆಗಳ ಒಟ್ಟು ಮೊತ್ತ ಜಿಡಿಪಿಯ ಶೇ.16.5 ರಷ್ಟಿದೆ. ಇದರಲ್ಲಿ ಎನ್​ಪಿಎಸ್ ಪಾಲು ಶೇ.3.5 ಇದ್ದು, ಮುಂದಿನ ವರ್ಷಗಳಲ್ಲಿ ದುಪ್ಪಟ್ಟಿಗೂ ಅವಕಾಶ ಇದೆ. ದೇಶದ ಪ್ರತಿ ಹತ್ತು ಮಂದಿಯಲ್ಲಿ ಒಬ್ಬರು 65 ವರ್ಷದವರಾಗಿದ್ದು, ಅವರಿಗೆ ಇಪಿಎಫ್ ಉತ್ತಮ ಆಯ್ಕೆ ಆಗಲಿದೆ. ಜತೆಗೆ ಯುವ ಜನಾಂಗವನ್ನೂ ಇಪಿಎಫ್​ನತ್ತ ಆಕರ್ಷಿಸಲು ದೇಶಾದ್ಯಂತ ಜಾಗೃತಿ ಅಭಿಯಾನವನ್ನು ಕೈಗೊಳ್ಳಲು ಪಿಎಫ್​ಆರ್​ಡಿಎ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net