

ಬೆಂಗಳೂರು: ರಾಜ್ಯದ ಆಡಳಿತದಲ್ಲಿ ಕನ್ನಡಕ್ಕೆ ಮಹತ್ವ-ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಗಳು ಜಾರಿಯಾಗಿದ್ದು, ರಾಜ್ಯದಲ್ಲೆಡೆ ಕವಾಯತು ಆದೇಶಗಳು ಕೂಡ ಕನ್ನಡದಲ್ಲೇ ಇವೆ. ಈ ಸಲುವಾಗಿ ರಾಜ್ಯದ ಪೊಲೀಸರು ಮಹತ್ವದ ಕ್ರಮಕೈಗೊಂಡಿದ್ದು, ಗೃಹಸಚಿವರಿಂದ ಆದೇಶ ಕೂಡ ಹೊರಡಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 2021ರಲ್ಲಿ ಕನ್ನಡದಲ್ಲಿ ಕವಾಯತು ಆದೇಶ ಜಾರಿಗೆ ತರಲಾಗಿತ್ತು. ಆಂಗ್ಲ ಭಾಷೆಯಲ್ಲಿದ್ದ ಕವಾಯತು ಆದೇಶಗಳನ್ನು ಈಗಿನ ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಅಂದು ಅನುವಾದಿಸಿ ಕೊಟ್ಟಿದ್ದರು. ಅದಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆಯೂ ಕನ್ನಡದಲ್ಲೇ ಕವಾಯತು ಆದೇಶ ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಕುರಿತ ಹಿಂದಿನ ಆದೇಶದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.