ಈಗ ಎಲ್ಲರೂ ಮೀಸಲಾತಿ ಪರ; ವಿರೋಧಿಸುವವರು ಯಾರೂ ಇಲ್ಲ: CM ಸಿದ್ದರಾಮಯ್ಯ | Reservation

dk - 2025-04-05T174436.087
Published on

Reservation :ಮೀಸಲಾತಿ ವಿರುದ್ಧ ಮಾತಾಡುತ್ತಿದ್ದವರೆಲ್ಲಾ ಈಗ ಮೀಸಲಾತಿ ಪಡೆದು ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗ ಮೀಸಲಾತಿ ವಿರೋಧಿಸುವವರು ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಅವರ 118 ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಪ್ರೇಮಿ, ಸಾಮಾಜಿಕ ನ್ಯಾಯದ ಪರವಾಗಿದ್ದವರು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸ್ಪಷ್ಟವಾದ ನಿಲುವು ಹೊಂದಿದ್ದರು ಎಂದು ವಿವರಿಸಿದರು.

ನಾವು ಜಾರಿ ಮಾಡಿರುವ ಐದೂ ಗ್ಯಾರಂಟಿಗಳೂ ಜನರ ಕೈಯಲ್ಲಿ ಹಣ ಇರಬೇಕು, ಕೊಳ್ಳುವ ಶಕ್ತಿ ಹೆಚ್ಚಾಗಬೇಕು ಎನ್ನುವ ನಮ್ಮ ಉದ್ದೇಶವನ್ನು ಯಶಸ್ವಿಯಾಗಿ ಈಡೇರಿಸಿದೆ ಎಂದರು.

ಜಾತಿ ಸೃಷ್ಟಿಸಿದವರು ನಾವಲ್ಲ. ಆದರೆ ಈ ಜಾತಿಯ ಅಸಮಾನತೆಗೆ ಬಲಿ ಆಗಿರುವವರು ನಾವು. ಜಾತಿ ಇರುವ ವರೆಗೂ ಸಮಾನ ಅವಕಾಶಗಳು ಸಿಗುವುದಿಲ್ಲ. ಏಕೆಂದರೆ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಎಂದರು.

ಬಾಬು ಜಗಜೀವನ್ ರಾಮ್ ಅವರು ಕೇಂದ್ರ ಸಚಿವರಾಗಿ ಹಸಿರು ಕ್ರಾಂತಿ ಮಾಡಿ ಎಲ್ಲರಿಗೂ ಆಹಾರ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಮಗೆಲ್ಲಾ ಹಬ್ಬದ ದಿನ ಮಾತ್ರ ಅನ್ನ ಸಿಗುತ್ತಿತ್ತು. ಈ ಪರಿಸ್ಥಿತಿ ಯಾರಿಗೂ ಬರಬಾರದು, ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಅನ್ನ ಭಾಗ್ಯ ಜಾರಿ ಮಾಡಿದೆ ಎಂದು ವಿವರಿಸಿದರು.

ಬಾಕ್ಸ್

ಒಳ ಮೀಸಲಾತಿ ಬಗ್ಗೆ ಅನುಮಾನ ಬೇಡ. ಜಾರಿ ಮಾಡೇ ಮಾಡ್ತೀವಿ. ನೀವು ಬೇಡ ಅಂದರೂ ನಾವು ಜಾರಿ ಮಾಡ್ತೀವಿ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಖಚಿತವಾಗಿ ಪಾಲಿಸುತ್ತೇವೆ. ನಾಗಮೋಹನ್ ದಾಸ್ ಅವರು ಎರಡು ತಿಂಗಳ ಕಾಲಾವಧಿ ಕೇಳಿದ್ದಾರೆ. ನಾವು ಕೊಟ್ಟಿದ್ದೇವೆ. ಬಳಿಕ ಯಾರಿಗೂ ಅನ್ಯಾಯ ಆಗದಂತೆ ಜಾರಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net