

ಯಾರು ಭಗವಂತನಲ್ಲಿ ಪೂರ್ಣ ಪ್ರಮಾಣರಾಗಿ ಶರಣಾಗುತ್ತಾರೋ, ಅವರು ಎಂದಿಗೂ ಕಷ್ಟ ನಿವಾರಣೆಗಾಗಿ ಪ್ರಾರ್ಥಿಸುವುದಿಲ್ಲ, ಬದಲಾಗಿ ಕಷ್ಟಗಳನ್ನು ಎದುರಿಸುವ, ಸಹಿಸುವ ಶಕ್ತಿಗಾಗಿ ಮೊರೆಯಿಡುತ್ತಾರೆ. ಭಾಗವತ ಪುರಾಣದಲ್ಲಿ ತಾಯಿ ಕುಂತಿ ದೇವಿಯ ಪ್ರಾರ್ಥನೆಯೊಂದಿದೆ: ವಿಪದಃ ಸಂತು ನಃ ಶಶ್ಚತ್ತತ್ರ ತತ್ರ ಜಗದ್ಗುರೋ | ಭವತೋ ದರ್ಶನಂ ಯತ್ಸಾ್ಯದಪುನರ್ಭವ ದರ್ಶನಮ್ || (ಭಾಗವತ 1-8-25)- ‘ಹೇ ಜಗದ್ಗುರು, ಎಲ್ಲ ಕಡೆಗಳಿಂದಲೂ ವಿಪತ್ತುಗಳು ನಮಗೆ ಬರಲಿ, ಏಕೆಂದರೆ
ಇದರಿಂದ ಜನನ ಮರಣಗಳನ್ನು ನಿವಾರಿಸುವ ನಿನ್ನ ದಿವ್ಯ ದರ್ಶನ ಭಾಗ್ಯ ಸಾಧ್ಯವಾಗುವುದು!’ ಸಾಮಾನ್ಯವಾಗಿ ಕಷ್ಟಗಳೇ ಬರಬಾರದು, ಸದಾ ಸುಖ ಸಂತೋಷದಿಂದಿರಬೇಕು ಎಂದು ಪ್ರಾರ್ಥಿಸುವವರ ಸಂಖ್ಯೆಯೇ ಅಪಾರ. ಆದರೆ ಕುಂತಿದೇವಿ ಕಷ್ಟಗಳನ್ನೇ ನೀಡು ಎಂದು ಪ್ರಾರ್ಥಿ ಸುವುದರ ಹಿಂದೆ ಒಂದು ಅದ್ಭುತ ತತ್ತ್ವ ಅಡಗಿದೆ. ಭಗವದನುಗ್ರಹ ನಮ್ಮ ಎಲ್ಲ ಕಷ್ಟ ಕೋಟಲೆಗಳನ್ನು ಪರಿಹರಿಸದೆ ಇರಬಹುದು. ಆದರೆ ಅದಿದ್ದರೆ ಜೀವನದಲ್ಲಿ ಎಲ್ಲ ಸಂಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಬಹುದು. ಈ ಪರೀಕ್ಷೆಯಲ್ಲಿ ನಮ್ಮೊಳಗಿನ ಕಲ್ಮಶವೆಲ್ಲ ಸುಟ್ಟು ಹೋಗುವುದು. ಇದು ನಮ್ಮ ಆಂತರಿಕ ಪರಿಶುದ್ಧತೆಯನ್ನು ವೃದ್ಧಿಸುವುದು. ಇದರಿಂದ ಹೆಚ್ಚು ಶರಣಾಗತಿಯ ಭಾವ ಉಂಟಾಗುವುದು.
ಆದರೆ ವಾಸ್ತವವಾಗಿ ಯಾರಿಗೂ ಶರಣಾಗತಿಯ ಭಾವ ಬೇಕಿಲ್ಲ! ಅಹಂಕಾರ, ದರ್ಪ, ಸ್ವಾರ್ಥ ಬುದ್ಧಿಯಿಂದ ತುಂಬಿರುವ ಮನುಜ ಶರಣಾಗಲು ಸುತರಾಂ ಅಣಿಯಾಗಿರುವುದಿಲ್ಲ. ನಿಜವಾದ ಸಾಧಕನು ಮಾತ್ರ ಯಾವ ರೀತಿಯಲ್ಲಿ ದುರಿತಗಳು ಬರದಿರಲಿ ಎಂದು ಮೊರೆಯಿಡದೆ, ಏನೇ ಕಷ್ಟಕಾರ್ಪಣ್ಯಗಳು ಬಂದಾಗ್ಯೂ ತಾನು ಮಾತ್ರ ಭಗವದ್ ಶಕ್ತಿಯಲ್ಲಿ ಶರಣಾಗಿ ತನು, ಮನವನ್ನೆಲ್ಲಾ ಭಗವಂತನ ಪಾದಾರವಿಂದಗಳಲ್ಲಿ ಅರ್ಪಿತವಾಗಿರುವಂತೆ ಪ್ರಯತ್ನಿಸುತ್ತಾನೆ. ಇದೇ ನಿಜವಾದ ಅರ್ಥದಲ್ಲಿ ಶರಣಾಗತಿ.
ಬದುಕಿನಲ್ಲಿ ವೃಥಾ ಅಲೆದಾಡದೆ ಇದ್ದ ಸ್ಥಳದಲ್ಲಿಯೇ ನಿಯಮಬದ್ದ ಹಾಗೂ ಅರ್ಥಗರ್ಭಿತ ಜೀವನವನ್ನು ನಡೆಸುತ್ತಾ ಭಗವದ್ದರ್ಶನದ ಲಾಭವನ್ನು ಪಡೆಯಬಹುದು ಎಂದು ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ವಿವರಿಸುತ್ತಾರೆ. ಅದೇ ಮನುಷ್ಯ ಜನ್ಮದ ಏಕೈಕ ಗುರಿ ಭಗವಂತನನ್ನು ಪಡೆಯುವುದು ಎಂದು. ಹಾಗಾಗಿ ಪ್ರಾಪಂಚಿಕರು ತಮ್ಮ ಎಲ್ಲಾ ಕರ್ತವ್ಯಗಳನ್ನು ಪಾಲಿಸಿಕೊಂಡು ಮೂಲ ಅಂಶವಾದ ಭಗವದ್ದರ್ಶನಕ್ಕೆ ಸದಾ ಮನಸ್ಸಿಡಬೇಕು ಎಂದು ಬೋಧಿಸುತ್ತಿದ್ದರು. ಈ ಆಧುನಿಕ ಕಾಲಘಟ್ಟದಲ್ಲಿ ಜನರೇನೋ ದೇವಾಲಯ, ತೀರ್ಥ ಕ್ಷೇತ್ರ, ಸತ್ಸಂಗಗಳಿಗೆ ಭೇಟಿ ನೀಡುತ್ತಾರೆ. ಆದರೆ ಶ್ರದ್ಧೆ ಹಾಗೂ ನಿರಂತರತೆ ಇಲ್ಲ. ಅಕಸ್ಮಾತ್ತಾಗಿ ಯಾರೋ ಹೊಸದೊಂದು ದೇವಸ್ಥಾನ ಇದೆ, ಅಲ್ಲಿ ಮನಸ್ಸಿನ ಆಕಾಂಕ್ಷೆಗಳು ಪೂರೈಸುತ್ತವೆ ಎಂದಾಕ್ಷಣ ಹತ್ತಾರು ವರುಷಗಳಿಂದ ಭೇಟಿ ನೀಡುತ್ತಿದ್ದ ದೇವಸ್ಥಾನವನ್ನೇ ಬಿಟ್ಟು ಮತ್ತೆ ಹೊಸ ದೇವಾಲಯಕ್ಕೆ ಪ್ರಯಾಣ!
ಯಾರೋ ನೂತನ ಗುರುಗಳು ಅತ್ಯಂತ ಆಧುನಿಕತೆಯ ಹಿನ್ನೆಲೆಯಲ್ಲಿ ಉಪದೇಶ ನೀಡುತ್ತಿದ್ದಾರೆ ಎಂದಾ ಕ್ಷಣ ಪರಂಪರಾನುಗತವಾಗಿ ನಡೆದು ಬಂದಿದ್ದ ಕುಲಗುರುವನ್ನು ಮರೆತು ನೂತನ ಗುರುವಿನತ್ತ ಮನಸ್ಸು ವಾಲುತ್ತದೆ. ಹೀಗೆ ಆಧುನಿಕತೆಯ ಕ್ಷಣಿಕ ಪ್ರಾಪಂಚಿಕತ್ವದ ಸುಳಿಯಲ್ಲಿ ಸಿಲುಕಿ ಕೊನೆಗೆ ಯಾವುದರಲ್ಲೂ ಶ್ರದ್ಧೆ, ಭಕ್ತಿ, ಶರಣಾಗತಿ ತತ್ತ್ವಗಳನ್ನೆಲ್ಲಾ ಮರೆತು ಅಪೂರ್ವ ಸಮಯ, ಕಾಲವನ್ನು ವೃಥಾ ಕಳೆಯುವಂತಹ ಪರಿಸ್ಥಿತಿಗೆ ಮಾನವ ತಲುಪಿದ್ದಾನೆ. ಒಂದು ಘಟ್ಟದಲ್ಲಿ ತಿರುತಿರುಗಿ ಯಾವ ಫಲಿತಾಂಶವನ್ನೂ ಪಡೆಯದೆ ವೃಥಾ ಆಯಸ್ಸನ್ನು ವ್ಯಯ ಮಾಡಿದಂತೆಯೇ ಸರಿ. ಇಂತಹ ಸ್ಥಿತಿಯಲ್ಲಿರುವವರಿಗೆ ಪರಮಹಂಸರು ಸ್ಥಿರವಾಗಿರುವ ಮನಸ್ಸನ್ನು ಹೊಂದಬೇಕು ಎಂದು ಭೋಧಿಸುತ್ತಾರೆ.
ಹಡಗಿನ ಧ್ವಜಸ್ತಂಭದ ಮೇಲೆ ಕುಳಿತ ಹಕ್ಕಿಯು ವೃಥಾ ಅಲೆದಲೆದು ಯಾವುದೇ ಗತಿಯನ್ನು ಕಾಣದೆ ಸಂಪೂರ್ಣವಾಗಿ ಬಸವಳಿದು ಅಶಕ್ತವಾಗಿ ತಾನು ಆರಂಭದಲ್ಲಿ ಕುಳಿತಿದ್ದ ಮಹಾನ್ ನೌಕೆಯ ಧ್ವಜಸ್ತಂಭವೇ ಶಾಶ್ವತ ಪರಿಹಾರ ಎಂಬುದಾಗಿ ತಿಳಿದು ತನ್ನ ಪ್ರಯಾಣವನ್ನು ಜಹಜಿನೊಂದಿಗೇ ಮುಂದುವರಿಸಿದ ಕಥೆ ಹಿಂದೊಮ್ಮೆ ಹೇಳಿದ್ದೆ. ಆ ರೂಪಕದಂತೆಯೇ ಇವರು ಕೂಡ ಒಂದು ಭಾವನೆ, ಭಕ್ತಿ, ತತ್ತ್ವ, ವಿಚಾರ ಹಾಗೂ ಪೂರ್ಣ ನಂಬಿರುವ ಭಗವಂತನಲ್ಲಿ ಶರಣಾಗಿ ಸರ್ವಸ್ವವೂ ಅವನ ಪಾದಾರವಿಂದಗಳಿಗೆ ಸಮರ್ಪಿಸಿ ಜೀವಿಸಿದಾಗ ಖಂಡಿತವಾಗಿ ಖಚಿತವಾದ ಗುರಿಯನ್ನು ಸೇರಬಹುದು. ನಂಬಿದ ದೈವಕ್ಕೆ ಪರಿಪೂರ್ಣವಾಗಿ ಶರಣಾಗಿ ಬದುಕನ್ನು ಸಾಗಿಸಿದರೆ ಸುಖ ಸಂತೋಷದ ಬಾಗಿಲು ತಟ್ಟಿದಂತೆಯೇ ಸರಿ.