ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

1 school TNP
Published on

ತಿ.ನರಸೀಪುರ : ಮಕ್ಕಳು ಉತ್ತಮವಾಗಿ ವ್ಯಾಸಂಗ ಮಾಡಿ ಓದಿದ ಶಾಲೆಗೆ ಕೀರ್ತಿ ಮತ್ತು ಪಾಲಕರ ಶ್ರಮಕ್ಕೆ ಪ್ರತಿಫಲ ದೊರಕಿಸಿಕೊಡಬೇಕೆಂದು ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ, ಹಿರಿಯ ವೈದ್ಯ ಡಾ. ಚಂದ್ರಶೇಖರ ಹೇಳಿದರು.
ಸಂಸ್ಥೆ ವತಿಯಿಂದ ಪಟ್ಟಣದ ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ನೋಟ್‌ಬುಕ್ ವಿತರಿಸಿ ಅವರು ಮಾತನಾಡಿದರು.
ಮಾನವರಾಗಿ ಜನಿಸಿದ ಮೇಲೆ ಸೃಜನ ಶೀಲತೆ ರೂಢಿಸಿಕೊಂಡು ಸಾಧನೆ ಮಾಡಬೇಖು. ಸಮಾಜದಲ್ಲಿ ಯಾವುದೇ ಸೇವೆ ಮಾಡಲು ಶಿಕ್ಷಣದ ಅವಶ್ಯಕತೆ ಬೇಕಿಲ್ಲ. ಸಮರ್ಪಣಾ ಗುಣ ಇದ್ದರೆ ಸಾಕು ಎಂದ ಅವರು, ಅಕ್ಷರ ಕಲಿಯದ ಸಾಲು ಮರದ ತಿಮ್ಮಕ್ಕ ರಾಷ್ಟ್ರವೇ ಗುರುತಿಸುವ ಸಾಧನೆ ಮಾಡಿದ್ದಾರೆ. ಹಾಗಾಗಿ ಶಾಲೆಯಲ್ಲಿ ಕಲಿಯುವ ಶಿಕ್ಷಣದೊಂದಿಗೆ ಮಾನವೀಯ ಗುಣಗಳೂ ಮುಖ್ಯ ಎಂದರು.
ದೇವರು ಕೊಟ್ಟಿರುವ ಮಾನವ ಜನ್ಮವನ್ನು ತುಕ್ಕು ಹಿಡಿಯಲು ಬಿಡಬಾರದು.ಬಲವಾದ ನಂಬಿಕೆಯೊಂದಿಗೆ ಮುನ್ನುಗ್ಗಿದರೆ ಒಂದಲ್ಲಾ ಒಂದು ದಿನ ಒಳ್ಳೆಯದಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮಗೆ ಸಿಕ್ಕರುವ ವಿದ್ಯಾರ್ಥಿ ಜೀವನದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಮಕ್ಕಳು ದೇಶದ ಮುಂದಿನ ಪ್ರಜೆಗಳು. ಅವರಿಗೆ ಶಿಕ್ಷಣದಲ್ಲಿ ಯಾವುದೇ ಕೊರತೆ ಬಾರದಿರಲಿ ಎನ್ನುವುದು ನಮ್ಮ ಸಂಸ್ಥೆ ಉದ್ದೇಶ. ಹಾಗಾಗಿ ನೋಟ್‌ಬುಕ್ ವಿತರಣೆ ಮಾಡಲಾಗಿದೆ. ಇದು ಒಂದು ಅಳಿಲು ಸೇವೆ ಎಂದರು.
ಕರ್ನಾಟಕ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ಜಿಲ್ಲೆಯ 173 ಶಾಲೆಗಳಿಗೆ ಪುಸ್ತಕ ಹಾಗು ಪರಿಕರಗಳನ್ನು ವಿತರಿಸುವ ಮೂಲಕ ಸರ್ಕಾರ ಮಾಡದ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ. ಯಾವುದೇ ಜಾತಿ,ಧರ್ಮ ಪರಿಗಣಿಸದೆ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಿದೆ ಎಂದರು.
ಡಾ. ಚಂದ್ರಶೇಖರ್ ಅವರು ವೈದ್ಯ ವೃತ್ತಿಯೊಂದಿಗೆ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟದ ಅಧ್ಯಕ್ಷ ತಗಡೂರು ಗುರು, ರಾಷ್ಟ್ರೀಯ ಶಿಕ್ಷಣ ಒಕ್ಕೂಟದ ಜಿಲ್ಲಾ ನಿರ್ದೇಶಕಿ ನಳಿನಿ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಕುರುಬೂರು ಶಿವು, ವಾಲ್ಮೀಕಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಡಾ.ಮಹದೇವಯ್ಯ, ಕಾರ್ಯದರ್ಶಿ ಆಲಗೂಡು ನಾಗರಾಜು, ಮುಖ್ಯ ಶಿಕ್ಷಕಿ ಬಿ.ಎಂ.ಮಂಜುಳಾ, ಶಿಕ್ಷಕಿಯರಾದ ಎಂ. ಪುಷ್ಪಲತಾ, ಸೌಮ್ಯಾ, ಆಶಾ, ಪಿ.ಶಿಲ್ಪಾ, ಎಲ್.ಚೈತ್ರಾ, ಮಹರ್ಷಿ ವಾಲ್ಮೀಕಿ ಟ್ರಸ್ಟ್ ಅಧ್ಯಕ್ಷ ಯಡದೊರೆ ಮಹೇಶ ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net