

ನವದೆಹಲಿ: ಇತ್ತೀಚೆಗೆ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸೆಲೆಬ್ರಿಟಿಗಳಾಗುತ್ತಿದ್ದಾರೆ. ತಮ್ಮ ಸೌಂದರ್ಯದ ಜತೆಗೆ ಬುದ್ದಿವಂತಿಕೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಐಪಿಎಸ್ ಅಧಿಕಾರಿ ಅಶ್ನಾ ಚೌಧರಿ ಕೂಡ ಒಬ್ಬರು.
ಅಶ್ನಾ ಚೌಧರಿ ಅವರು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾ ಪಟ್ಟಣದ ಐಪಿಎಸ್ ಅಧಿಕಾರಿ. 2022ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 116ನೇ ಶ್ರೇಣಿಯೊಂದಿಗೆ ಉತ್ತೀರ್ಣರಾದರು. ಸಿವಿಲ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಲು ಸಾಕಷ್ಟು ಸವಾಲುಗಳನ್ನು ಅಶ್ನಾ ಎದುರಿಸಿದ್ದಾರೆ. ಸತತ ಎರಡು ಬಾರಿ ವಿಫಲವಾಗಿದ್ದರೂ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಆಕೆಯ ತಂದೆ ಡಾ. ಅಜಿತ್ ಚೌಧರಿ ಅವರು ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ತಾಯಿ ಹಿಂದು ಸಿಂಗ್ ಗೃಹಿಣಿ.
ಬಾಲ್ಯದಿಂದಲೂ ಅಶ್ನಾ ಅವರು ಅಧ್ಯಯನದಲ್ಲಿ ತುಂಬಾ ಸಕ್ರಿಯರಾಗಿದ್ದರು. ಸಮಾಜ ಸೇವೆಯಲ್ಲೂ ಆಸಕ್ತಿ ಹೊಂದಿದ್ದರು. ಅಶ್ನಾ ಅವರ ಕುಟುಂಬದ ಹೆಚ್ಚಿನವರು ಪ್ರಾಧ್ಯಾಪಕರಾಗಿದ್ದಾರೆ. ಆದರೆ, ಅಶ್ನಾ ಅವರ ಆಲೋಚನೆಗಳು ಬೇರೇನೆ ಇತ್ತು. ಅದಕ್ಕಿಂತಲೂ ಉನ್ನತ ಸ್ಥಾನಕ್ಕೇರುವ ಬಯಕೆ ಇತ್ತು. ಅಂತಿಮವಾಗಿ ಕಷ್ಟಪಟ್ಟು ಓದಿ ಐಪಿಎಸ್ ಅಧಿಕಾರಿಯಾದರು.
ಅಶ್ನಾ ಅವರು ಪಿಲ್ಖುವಾದಲ್ಲಿರುವ ಸೇಂಟ್ ಕ್ಸೇವಿಯರ್ ಶಾಲೆ, ಉದಯಪುರದ ಸೇಂಟ್ ಮೇರಿ ಶಾಲೆ ಮತ್ತು ಗಾಜಿಯಾಬಾದ್ನ ದೆಹಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ದೇಶದ ವಿವಿಧ ಶಾಲೆಗಳಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೇಶದ ಅತ್ಯಂತ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ದೆಹಲಿ ವಿಶ್ವವಿದ್ಯಾಲಯದ ರಾಮ್ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. 2022ರ ಯುಪಿಎಸ್ಸಿ ಪರೀಕ್ಷೆಯಲ್ಲಿ 116ನೇ ರ್ಯಾಂಕ್ ಪಡೆದರು ಮತ್ತು ಐಪಿಎಸ್ ಆಗಿ ಆಯ್ಕೆಯಾದರು.
ಸಿವಿಲ್ಸ್ನಲ್ಲಿ ರ್ಯಾಂಕ್ ಬರಬೇಕು ಅನ್ನೋ ಉದ್ದೇಶದಿಂದ ಪ್ರತಿದಿನ ಸುಮಾರು 10 ಗಂಟೆಗಳ ಕಾಲ ಓದಿನ ಕಡೆ ಅಶ್ನಾ ಗಮನ ಹರಿಸಿದ್ದರು ಎನ್ನುತ್ತಾರೆ ಆಕೆಯ ತಂದೆ ಅಜಿತ್ ಚೌಧರಿ. ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಅಶ್ನಾ ಅವರು ಎನ್ಜಿಒ ಜೊತೆಯೂ ಕೆಲಸ ಮಾಡಿದ್ದಾರೆ. ಓದುವಾಗಲೇ ತನ್ನ ಹೊಸ ಫ್ಯಾಷನ್ ಮತ್ತು ಪ್ರವಾಸಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ನಾ ಪೋಸ್ಟ್ ಮಾಡುತ್ತಿದ್ದರು. ಆಕೆಯ ಸೌಂದರ್ಯದಿಂದ ಪ್ರಭಾವಿತರಾದ ಕೆಲವು ಕಂಪನಿಗಳು ಮಾಡೆಲಿಂಗ್ ಅವಕಾಶಗಳನ್ನು ಸಹ ನೀಡಿದವು ಮತ್ತು ಕೆಲ ಕಾಲ ಮಾಡೆಲಿಂಗ್ನಲ್ಲೂ ಮಿಂಚಿದ್ದರು. ಅಧ್ಯಯನದ ಜೊತೆಗೆ ಮಾಡೆಲಿಂಗ್ನಲ್ಲೂ ಅಶ್ನಾ ತಮ್ಮ ಸಾಮರ್ಥ್ಯವನ್ನು ತೋರಿಸಿದರು.
ಒಂದು ಕಾಲದಲ್ಲಿ ಸುಂದರ ರೂಪದರ್ಶಿ ಆಗಿದ್ದ ಅಸ್ನಾ ಇಂದು ಐಪಿಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡುತ್ತಿದ್ದಾರೆ. ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದುಡಿಯುತ್ತಿದ್ದಾರೆ. ಅಶ್ನಾ ಅವರ ಜೀವನವು ಅನೇಕ ಜನರಿಗೆ ಸ್ಫೂರ್ತಿಯಾಗಿದೆ. (ಏಜೆನ್ಸೀಸ್)