ಹೆಚ್ಚು ಮಾತಾಡ್ತಿರ್ಲಿಲ್ಲ, ಮಾತಾಡಿದರೆ ಗುಂಡು ಹೊಡೆದ ಹಾಗಿರುತ್ತಿತ್ತು!

KSN
Published on
HS Venkatesh Murthy
ಡಾ. ಎಚ್.ಎಸ್. ವೆಂಕಟೇಶಮೂರ್ತಿ ಪ್ರಸಿದ್ಧ ಕವಿ
ಇಂದು ಜನವರಿ 26. ಇಡೀ ದೇಶಕ್ಕೆ ಗಣರಾಜ್ಯೋತ್ಸವ ಹಬ್ಬದ ಸಂಭ್ರಮ. ಲೇಖಕರಾದ ನಮಗೆ ಮತ್ತೊಂದು ವಿಶೇಷ. ಹಿಂದೆ ಜ. 26ರ ಬೆಳಗ್ಗೆ ನನ್ನ ಗುರುಗಳಾದ ಪ್ರಸಿದ್ಧ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಸಂಪರ್ಕ ಮಾಡುತ್ತಿದ್ದರು. ‘ನೆನಪಿದೆಯಾ ಇವತ್ತು ನಮ್ಮ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಜನ್ಮದಿನ, ಇಬ್ಬರೂ ಹೋಗಿ ಅಭಿನಂದನೆ ಹೇಳಿ ಬರೋಣೆ’ ಅನ್ನುತ್ತಿದ್ದರು. ಮಧ್ಯಾಹ್ನ 4 ಗಂಟೆ ಸುಮಾರಿಗೆ ಹೋಗುತ್ತಿದ್ದೆವು. ಕೆಎಸ್​ನ ಅವರು ನಡುಮನೆಯ ಮಂಚದ ಮೇಲೆ ಅಲಂಕಾರಭೂಷಿತರಾಗಿ ಕೂತಿರುತ್ತಿದ್ದರು. ಅಂದರೆ ಬಿಳಿ ಕಚ್ಚೆಪಂಚೆ, ಬಿಳಿ ಜುಬ್ಬಾ ಧರಿಸಿ ಹಣೆ ಮೇಲೆ ವಿಶೇಷ ಬೊಟ್ಟು ಇಟ್ಟು ದಪ್ಪ ಗಾಜಿನ ಕನ್ನಡಕ ಹಾಕಿಕೊಂಡಿರುತ್ತಿದ್ದರು. ಅದೇ ಸ್ಪುರದ್ರೂಪ, ತೇಜಸ್ವಿಯಾದ ಮುಖ. ನಮ್ಮನ್ನು ಕಂಡ ತಕ್ಷಣ ಸಂಭ್ರಮಿಸುತ್ತಿದ್ದರು. ಒಳಗಡೆಯಿಂದ ಅವರ ಪತ್ನಿ ವೆಂಕಮ್ಮ ಹೊರಬಂದು ಸ್ವಾಗತಿಸುತ್ತಿದ್ದರು. ಅವರು ರೇಷೆ್ಮ ಸೀರೆ ಉಟ್ಟಿರುತ್ತಿದ್ದರು. ನಾವು ಹರಟೆ ಶುರು ಮಾಡುತ್ತಿದ್ದೆವು. ಅವರಿಗೆ ನಶ್ಯದ ಪುಡಿ ಏರಿಸುತ್ತಿದ್ದರು. ಅದರ ಕೆಲವು ಅಂಶ ಅವರ ಬೆರಳ ತುದಿಯಲ್ಲಿ ಇರುತ್ತಿತ್ತು. ಆಗ ವೆಂಕಮ್ಮ, ‘ನೋಡಿ ಬಿಳಿ ಬಟ್ಟೆ ಹಾಕಿದ್ರೆ ಹಾಳು ನಶ್ಯದ ಪುಡಿ ಕೆಡವಿ ಕೊಳೆ ಮಾಡಿಕೊಳ್ತಾರೆ’ ಎಂದು ಆಕ್ಷೇಪಿಸುತ್ತಿದ್ದರು. ಅದಕ್ಕೆ ಕೆಎಸ್​ನ ಅವರದು ಹ್ಞೂ ಎಂಬ ಉದ್ಘಾರ ಮಾತ್ರ ಇರುತ್ತಿತ್ತು.

ಕೆಎಸ್​ನ ಹೆಚ್ಚು ಮಾತನಾಡುತ್ತಿರಲಿಲ್ಲ. ಮಾತನಾಡಿದರೆ ಗುಂಡು ಹೊಡೆದ ಹಾಗೆ ಇರುತ್ತಿತ್ತು. ಅನೇಕ ಕಾರ್ಯಕ್ರಮಗಳಲ್ಲಿ ಅವರ ಮಾತಿನ ವರಸೆ ಕೇಳಿದ್ದೇನೆ. ಒಮ್ಮೆ ಅವರ 9ನೇ ಪುಸ್ತಕ ‘ನವಪಲ್ಲವ’ ಬಿಡುಗಡೆ. ನ್ಯಾಷನಲ್ ಕಾಲೇಜಿನಲ್ಲಿ ಕಾರ್ಯಕ್ರಮ. ಸಭೆ ಕಿಕ್ಕಿರಿದು ತುಂಬಿತ್ತು. ಬಿಡುಗಡೆ ಮಾಡಿದವರು ಮತ್ತೊಬ್ಬ ಮಹಾನ್ ಕವಿ ಗೋಪಾಲಕೃಷ್ಣ ಅಡಿಗರು. ಪುಸ್ತಕದ ಬಗ್ಗೆ ಒಳ್ಳೆಯ ಮಾತನಾಡಿದ ಅಡಿಗರು ತಮಾಷೆಯಾಗಿ, ‘ನರಸಿಂಹಸ್ವಾಮಿಯವರಿಗೆ ಈ ವಯಸ್ಸಿನಲ್ಲೂ ನವ ಪಲ್ಲವ -ಹೊಸಚಿಗುರು ಬರ್ತಾ ಇದೆ’ ಎಂದರು. ಅದಕ್ಕೆ ಕೆಎಸ್​ನ, ‘ನವ ಪಲ್ಲವ ಒಂಬತ್ತನೇ ಪುಸ್ತಕ, ಹೊಸ ಚಿಗುರಲ್ಲ’ ಅಂದರು. ಇಡೀ ಸಭೆ ಕರತಾಡನ ಮಾಡಿತು. ಇದು ಅವರ ವರಸೆ.

ಒಂದಿನ ಮಧ್ಯಾಹ್ನ ಅವರ ಮನೆಗೆ ಹೋಗಿದ್ದೆ. ಈಚೆಗೆ ಪುತಿನ ಮನೆಗೆ ಹೋಗಿದ್ರಾ ಅಂದ್ರು. ಹೋಗಿದ್ದೆ, ವಯಸ್ಸಾಗಿದೆ, ಕಣ್ಣು, ಕಿವಿ ಸುಮಾರು.. ಅಂದೆ. ನಿರ್ಭಾವುಕ ಮುಖದಲ್ಲಿ ಕೆಎಸ್​ನ ಹೇಳಿದರು: ‘ಮೂಗೂ ಸುಮಾರೇ!’ ತಕ್ಷಣಕ್ಕೆ ಅವರ ಮಾತಿನ ಅರ್ಥ ತಿಳಿಯಲಿಲ್ಲ. ಮನೆಗೆ ಬರುವಾಗ ಹೊಳೆಯಿತು. ಪುತಿನ ಅವರು ಯಾರ ಹತ್ತಿರವೋ ಮಾತನಾಡುವಾಗ ‘ಕೆಎಸ್​ನ ಅವರು ಒಳ್ಳೆಯ ಕವಿ, ಆದರೆ ‘ಮೈಸೂರು ಮಲ್ಲಿಗೆ’ಗೇ ನಿಂತುಬಿಟ್ಟರು. ಅದು ದಾಂಪತ್ಯ ಗೀತೆ, ವಿಶೇಷ ಏನಿಲ್ಲ’ ಎಂದಿದ್ದು ಇವರವರೆಗೂ ತಲುಪಿತ್ತು. ಮಲ್ಲಿಗೆ ಪರಿಮಳ ತಿಳಿಯಲು ಮೂಗೂ ಚೆನ್ನಾಗಿರಬೇಕು ಎನ್ನುವುದು ಅದಕ್ಕೆ ಇವರ ಚಾಟೋಕ್ತಿಯಾಗಿತ್ತು. ಅದು ಪುತಿನ ಅವರಿಗೂ ಗೊತ್ತಾಯಿತು. ಅವರು ‘ಕೆಎಸ್​ನ ನಿಜವಾದ ಕವಿ. ಬೈಬೇಕಾದರೂ ಕಾವ್ಯ ಬರುತ್ತೆ ಅವರ ಬಾಯಲ್ಲಿ’ ಎಂದು ಪ್ರತಿಕ್ರಿಯಿಸಿದ್ದರು.

ಮೈಸೂರಲ್ಲಿ 80ನೇ ಸಾಹಿತ್ಯ ಸಮ್ಮೇಳನಕ್ಕೆ ಕೆಎಸ್​ನ ಅಧ್ಯಕ್ಷರಾಗಿದ್ದರು. ಸಂಜೆ ಕವಿಗೋಷ್ಠಿ. ನನ್ನ ಅಧ್ಯಕ್ಷತೆ. ರಾಮಚಂದ್ರ ಶರ್ಮಾ ಉದ್ಘಾಟಕರು. ಅವರು ಮಾತನಾಡುವಾಗ ‘ಕೆಎಸ್​ನ ಕಾವ್ಯ ಜನರಿಗೆ ಅರ್ಥವಾಗುವಂತಿರಬೇಕು ಅಂದರು. ಅದು ತಪು್ಪ, ಅರ್ಥಪೂರ್ಣವಾಗಿ ಕವಿತೆ ರಚಿಸಬೇಕು. ಕಾವ್ಯ ಒಂದು ತಪಸ್ಸು’ ಅಂದರು. ಅದಕ್ಕೆ ಉತ್ತರಿಸಿದ ಕೆಎಸ್​ನ, ‘ಶರ್ಮ ಅವರು ಕಾವ್ಯ ಒಂದು ತಪಸ್ಸು ಅಂದ್ರು. ಅದರ ವಿಳಾಸ ನನಗೆ ಗೊತ್ತಿಲ್ಲ. ಅದನ್ನು ಹೇಳಿದರೆ ಹೋಗಿ ಬರ್ತೀನಿ’ ಅಂದ್ರು. ಹೀಗೆ ಕಡಿಮೆ ಶಬ್ದಗಳಲ್ಲಿ ಹಿರಿದಾದ ಅರ್ಥವನ್ನು ಅವರು ಕೊಡುತ್ತಿದ್ದರು. ಅವರ ‘ತೆರೆದ ಬಾಗಿಲು’ ಅದಕ್ಕೆ ಉದಾಹರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net