ಲ್ಯಾಂಟರ್ನ್​​ ಯುಗ ಮುಗಿದಿದೆ..ಕ್ಷಿಪಣಿ, ಫಿರಂಗಿಗಳನ್ನು ಉತ್ಪಾದಿಸಲು ಬಿಹಾರ ಸಿದ್ಧವಾಗಿದೆ : ಸಚಿವ ರಾಜನಾಥ್ ಸಿಂಗ್ | Rajnath Singh

Rajnath Singh
Published on

ಪಾಟ್ನಾ: ಬಿಹಾರದಲ್ಲಿ "ಕಟ್ಟಾ" ಮತ್ತು "ಲ್ಯಾಂಟರ್ನ್​​" ಯುಗ ಮುಗಿದಿದ್ದು, ದೇಶೀಯ ಬಂದೂಕುಗಳ ಬದಲಿಗೆ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ಉತ್ಪಾದಿಸಲು ರಾಜ್ಯ ಸಜ್ಜಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶನಿವಾರ (ನ 8) ಹೇಳಿದ್ದಾರೆ.

ರಾಮಗಢ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಂಗ್, ರಾಜ್ಯದಲ್ಲಿ ರಕ್ಷಣಾ ಕಾರಿಡಾರ್ ತೆರೆಯುವ ಯೋಜನೆಯನ್ನು ಇದೇ ವೇಳೆ ಘೋಷಿಸಿದರು. ಎನ್‌ಡಿಎ ಪ್ರಣಾಳಿಕೆಯನ್ನು "ಅಟಲ್ ಪ್ರತಿಜ್ಞಾ" ಮತ್ತು "ಭೀಷ್ಮ ಪ್ರತಿಜ್ಞಾ" ಎಂದು ಬಣ್ಣಿಸಿದ ರಾಜನಾಥ್ ಸಿಂಗ್, ಕಟ್ಟಾ ಮತ್ತು ಲ್ಯಾಂಟರ್ನ್​​ ಯುಗ ಮುಗಿದ ಅಧ್ಯಾಯ ಎಂದು ಹೇಳಿದರು.

ಬಿಹಾರದ ಪ್ರತಿಯೊಂದು ಮನೆಗೂ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ನಾವು ಸುಳ್ಳು ಭರವಸೆಯನ್ನು ನಾವು ನೀಡುವುದಿಲ್ಲ. ಆರ್ಥಿಕವಾಗಿ ಯೋಚಿಸಿದಾಗ ಅದು ಅಸಾಧ್ಯ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ನಾವು ಭರವಸೆ ನೀಡಿದ್ದೇವೆ ಮತ್ತು ಇದಕ್ಕಾಗಿ ಬಿಹಾರದಲ್ಲಿ MSME ಕಾರಿಡಾರ್‌ಗಳು ಮತ್ತು ರಕ್ಷಣಾ ಕಾರಿಡಾರ್ ಅನ್ನು ಸ್ಥಾಪಿಸುವ ಭರವಸೆ ನೀಡಿದರು.

ಕಾಂಗ್ರೆಸ್ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, ಮತ ಪಡೆಯಲು ಓಲೈಕೆಗೆ ಮುಂದಾಗಿದೆ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಾಂಗ್ರೆಸ್ ಎಂದರೆ ಮುಸ್ಲಿಮರು, ಮುಸ್ಲಿಮರು ಎಂದರೆ ಕಾಂಗ್ರೆಸ್ ಎಂದು ಹೇಳಿದ್ದಾರೆ. ಕೈ ನಾಯಕರು ಮತ ಗಳಿಸಲು ಎಷ್ಟರ ಮಟ್ಟಿಗೆ ಹೋಗಬಹುದು ಎಂಬುದಕ್ಕೆ ಇದು ತಾಜಾ ಉದಾಹರಣೆ ಎಂದರು. ನಾವು ಎಂದಿಗೂ ಜಾತಿ ಅಥವಾ ಧರ್ಮದ ರಾಜಕೀಯದಲ್ಲಿ ತೊಡಗಿಸಿಕೊಂಡಿಲ್ಲ. ನಮ್ಮ ರಾಜಕೀಯವೇನಿದ್ದರು ನ್ಯಾಯ ಮತ್ತು ಮಾನವೀಯತೆ ಎಂದು ಹೇಳಿದರು.

ವಿಪಕ್ಷ ನಾಯಕ ರಾಹುಲ್ ಗಾಂಧಿ ಎಲ್ಲೇ ಹೋದರೂ, ಚುನಾವಣಾ ಆಯೋಗ ಬಿಹಾರದ ಜನರ ಮತಗಳನ್ನು ಕದ್ದಿದೆ ಎಂದು ಹೇಳುತ್ತಾರೆ. ರಾಜಕೀಯ ಯಶಸ್ಸನ್ನು ಸಾಧಿಸಲು ಸುಳ್ಳು ಹೇಳುವುದು ಅಗತ್ಯವೇ? ಅರ್ಥಪೂರ್ಣ ರಾಜಕೀಯ ಮಾಡಬೇಕಾದರೆ, ರಾಷ್ಟ್ರವನ್ನು ಕಟ್ಟುವ ರಾಜಕೀಯ ಮಾಡಿ ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಆಗದ ಘೋಷಣೆಗಳನ್ನು ಮಾಡುವುದಿಲ್ಲ, ಕಷ್ಟಕರವಾದ ಭರವಸೆಯನ್ನು ನೀಡುವುದಿಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ, ಪಕ್ಷಗಳ ಮೇಲೆ ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಂಡಿರುವ ಕಾರಣ ಈ ಪದ್ಧತಿ ಆರೋಗ್ಯಕರವಾಗಿದೆ, ನಾವು ಸಮಾಜವನ್ನು ನಿರ್ಮಿಸಲು ರಾಜಕೀಯವನ್ನು ಅನುಸರಿಸುತ್ತೇವೆಯೇ ಹೊರತು ಸರ್ಕಾರ ರಚಿಸಲು ಅಲ್ಲ. ಆರ್‌ಜೆಡಿ ಮತ್ತು ಕಾಂಗ್ರೆಸ್‌ನಂತಹ ಪಕ್ಷಗಳು ಸುಳ್ಳು ಹೇಳುವ ಮೂಲಕ ಮತ ಖರೀದಿಸುವಷ್ಟು ಹತಾಶವಾಗಿವೆ ಎಂದು ಆರೋಪಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net