

ದೊಡ್ಡಸಿದ್ದು ಹಾದನೂರು ಎಚ್.ಡಿ.ಕೋಟೆ
ಬಡಾವಣೆ ನಿರ್ಮಾಣ ಮಾಡಿ ಮನೆ, ರಸ್ತೆ, ಚರಂಡಿ, ಕರೆಂಟ್ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಿ 22 ವರ್ಷಗಳು ಕಳೆದರೂ ಕೂಡ ಪುರಸಭಾ ಆಡಳಿತ ಇ-ಸ್ವತ್ತು ಮಾಡಿಕೊಡದೆ ಇರುವುದರಿಂದ ಸರ್ಕಾರದ ಸೌಲಭ್ಯ ಪಡೆಯಲು ನಿವಾಸಿಗಳು ಪರದಾಡುವಂತಾಗಿದೆ.
ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ 17ನೇ ವಾರ್ಡಿನ ಕೃಷ್ಣಪುರ ಗ್ರಾಮದ ಹೊಸ ಬಡಾವಣೆಯ 76 ನಿವಾಸಿಗಳು ಇ-ಸ್ವತ್ತು ಸಿಗದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ.
2002-03ನೇ ಸಾಲಿನಲ್ಲಿ ಮಂತ್ರಿ ಆಗಿದ್ದ ಕೋಟೆ ಎಂ.ಶಿವಣ್ಣ, ಈ ಹಿಂದೆ ನಾಗನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ್ದ ಕೃಷ್ಣಪುರ ಗ್ರಾಮದಲ್ಲಿ ನಿವೇಶನ ಸಮಸ್ಯೆ ಇರುವುದನ್ನು ಮನಗಂಡು 2 ಎಕರೆ ಜಮೀನನ್ನು ಸರ್ಕಾರದ ವತಿಯಿಂದ ಖರೀದಿಸಿ ನಿವೇಶನ ರಹಿತ 76 ಜನರಿಗೆ ನಿವೇಶನ ಹಂಚಿಕೆ ಮಾಡಿದ್ದರು.
ನಂತರ ಸರ್ಕಾರದ ವತಿಯಿಂದ ಗುಂಪು ಮನೆ ಯೋಜನೆಯಡಿ 76 ಫಲಾನುಭವಿಗಳಿಗೂ ಮನೆ ಕಟ್ಟಿ ಕೊಡಲಾಯಿತು. ಬಡಾವಣೆಗೆ ರಸ್ತೆ, ಚರಂಡಿ, ಕರೆಂಟ್, ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಯಿತು.
ನಿವಾಸಿಗಳು ಕೂಡ ಕಾಲಕಾಲಕ್ಕೆ ಗ್ರಾಮ ಪಂಚಾಯತಿಗೆ ಎಲ್ಲ ರೀತಿಯ ತೆರಿಗೆ ಕಟ್ಟಿಕೊಂಡು ಬಂದಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 76 ಜನರ ಹೆಸರಿನಲ್ಲಿ ಎಲ್ಲ ರೀತಿಯ ಹಕ್ಕುಗಳನ್ನು ನೀಡಲಾಯಿತು. ಅದೇ ಪ್ರಕಾರದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ನಿವಾಸಿಗಳಿಗೆ ಸಮಸ್ಯೆ ಆಗದ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಆದರೆ, 2017ರ ನಂತರ ಗ್ರಾಮ ಪಂಚಾಯಿತಿಗೆ ಸೇರಿದ ಕೃಷ್ಣಪುರ ಗ್ರಾಮವನ್ನು ಎಚ್.ಡಿ.ಕೋಟೆ ಪುರಸಭೆಗೆ ಸೇರಿಸಲಾಯಿತು. ಆದರೆ ಇ-ಸ್ವತ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದಾಗ ನಿವೇಶನ ಮಂಜೂರು ಆದ ಬಗ್ಗೆ ಹಕ್ಕು ಪತ್ರ ನೀಡುವಂತೆ ಪುರಸಭಾ ಅಧಿಕಾರಿಗಳು ಕೇಳಿದ್ದಾರೆ. ನಿವಾಸಿಗಳಿಗೆ ಇ-ಸ್ವತ್ತು ಪಡೆಯಲು ಹಕ್ಕು ಪತ್ರ ಇಲ್ಲದೆ ಸಮಸ್ಯೆ ಎದುರಾಗಿದೆ. ಎಚ್.ಡಿ. ಕೋಟೆ ಸ.ನಂ 78 ಸರ್ಕಾರದ ಹೆಸರಿನಲ್ಲಿ ಆರ್‌ಟಿಸಿ ಇದ್ದು, ಇದು ನಿವಾಸಿಗಳ ಹೆಸರಿಗೆ ವರ್ಗ ಆಗಿಲ್ಲ.
ಪುರಸಭಾ ಕಚೇರಿಯಲ್ಲಿ ಕೆಲವು ನಿವಾಸಿಗಳಿಂದ ಇ-ಸ್ವತ್ತು ಮಾಡಿಕೊಡಲಾಗುತ್ತದೆ ಎಂದು ಸುಮಾರು 18 ಸಾವಿರ ರೂ. ವರೆಗೆ ಕಂದಾಯ ಕಟ್ಟಿಸಿಕೊಳ್ಳಲಾಗಿದೆ. ಆದರೆ, ಇದುವರೆಗೆ ಇ ಸ್ವತ್ತು ಮಾಡಿಕೊಟ್ಟಿಲ್ಲ. ಈ ಕುರಿತು ನಿವಾಸಿಗಳು, ಶಾಸಕ, ಸಂಸದರು ಹಾಗೂ ಗ್ರಾಮಕ್ಕೆ ಆಗಮಿಸಿದ ಮಂತ್ರಿಗಳ ಬಳಿ ಮನವಿ ಮಾಡಲಾಗಿದೆ. ಆದರೆ, ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ.
2017ರಿಂದ 2024ವರೆಗೆ ಎಂಟು ವರ್ಷಗಳಿಂದ ಪುರಸಭೆಗೆ ಕಂದಾಯ ವಸೂಲಾತಿ ಆಗಿಲ್ಲ. ಸುಮಾರು 10 ಲಕ್ಷ ರೂ. ವರೆಗೆ ಕಂದಾಯ ಸಂಗ್ರಹವಾಗಬೇಕಿತ್ತು. ಇದು ಬಡಾವಣೆ ಅಭಿವೃದ್ಧಿಗೆ ಸಹಾಯವಾಗುತ್ತಿತ್ತು. ಈಗ ಅತ್ತ ಆದಾಯವೂ ಇಲ್ಲ. ಇತ್ತ ಅಭಿವೃದ್ಧಿಯೂ ಇಲ್ಲ ಎಂಬಂತಾಗಿದೆ.