

ಬೆಂಗಳೂರು: ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲವೆಂದು ಕಳೆದ ಅರು ತಿಂಗಳಿಂದ ಹೇಳುತ್ತಾ ಬಂದಿದ್ದೇವೆ. ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಪಲ್ಲಟಗಳಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಸಚಿವರು, ಆಡಳಿತ ಪಕ್ಷದ ಹಲವು ಶಾಸಕರ ಹೇಳಿಕೆಗಳು, ಬಹಿರಂಗ ಚರ್ಚೆ ಗಮನಿಸಿದರೆ ಮುಂದಿನ ಬೆಳವಣಿಗೆಗಳ ಲಕ್ಷಣಗಳು ಗೋಚರಿಸುತ್ತವೆ ಎಂದರು.
ಅತಿವೃಷ್ಟಿ, ನೆರೆ ಹಾವಳಿ ಹಾನಿ ಪ್ರದೇಶಕ್ಕೆ ಭೇಟಿಯಿಂದ ಹಿಡಿದು ಜಾತಿ ಜನಗಣತಿವರೆಗೆ ಎಲ್ಲವೂ ಗೊಂದಲ ಗೂಡಾಗಿದೆ. ರಾಜ್ಯ ಸರ್ಕಾರದ ಆದ್ಯತೆಗಳೇನು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಕಟು ವಾಸ್ತವ ಹೇಳಿದರೆ ವಿರೋಧ ಪಕ್ಷಗಳು ವಿರೋಧಿಸುವುದೇ ಕೆಲಸವೆಂದು ಲಘುವಾಗಿ ಹೇಳುವುದು ಆಡಳಿತ ಪಕ್ಷದವರಿಗೆ ಅಭ್ಯಾಸವಾಗಿದೆ ಎಂದು ಟೀಕಿಸಿದರು.
ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿ ಗಣತಿಗೆ ನಿರ್ಧರಿಸಿತು. ಇದರಿಂದ ಗಣತಿದಾರ ಶಿಕ್ಷಕವೃಂದಕ್ಕೂ ಸಮಸ್ಯೆ ಆಗುತ್ತಿದೆ. ರಜೆ ದಿನಗಳನ್ನೂ ವಿಸ್ತರಿಸಿದ್ದರಿಂದ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳಿಗೆ ಒಂದೊಂದು ದಿನವೂ ಅಷ್ಟೇ ಮಹತ್ವದ್ದು ಎಂದು ನುಡಿದರು. ಶಾಲೆಗೆ ರಜೆ ಘೋಷಿಸಿ ಶಾಲಾ ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಉತ್ತರ ಕರ್ನಾಟಕದಲ್ಲಿ ಈ ರೀತಿ ಅತಿವೃಷ್ಟಿ ಆದರೂ ಕೃಷಿ ಸಚಿವರಿಗೆ ಅಲ್ಲಿ ಹೋಗಬೇಕೆಂದು ಅನಿಸುವುದಿಲ್ಲ. ಕಂದಾಯ ಸಚಿವರಿಗೆ ಹೋಗಬೇಕೆಂದು ಅನಿಸಲಿಲ್ಲ. ಪ್ರತಿಪಕ್ಷದ ನಾಯಕರು ಭೇಟಿ ಮಾಡದಿದ್ದರೆ ಸಿಎಂ ಆದಿಯಾಗಿ ಯಾವೊಬ್ಬ ಸಚಿವರು ಪ್ರವಾಸ ಮಾಡುತ್ತಿದ್ದಿಲ್ಲ ಎಂದರು.
ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. 10 ದಿನಗಳಲ್ಲಿ ಪರಿಹಾರ ಮೊತ್ತ ಕೊಡುವುದಾಗಿ ಸಚಿವ ಕೃಷ್ಣಬೈರೇಗೌಡರು ಹೇಳಿದ್ದು, ರೈತರು ಇನ್ನೆಷ್ಟು ದಿನ ಕಾಯಬೇಕು ಎಂದು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿಯವರ ಮನೆ ಮುಂದೆ ಗುಂಡಿ ಇದೆ, ಅಲ್ಲಿ ಗುಂಡಿ ಇದೆ, ಲಂಡನ್‌ನಲ್ಲಿದೆ ಎಂದು ಲೆಕ್ಕ ಹಾಕಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ ಬಂದಿದೆ ಛೇಡಿಸಿದರು.
ಬೇರೆ ದೇಶ, ರಾಜ್ಯಗಳ ಪರಿಸ್ಥಿತಿ ಮಾತನಾಡುವುದಕ್ಕೆ ನೀವೇ ಬೇಕೆ ? ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರಿನ ಜನರು ಕೇಳುತ್ತಿದ್ದು ತುರ್ತಾಗಿ ಗುಂಡಿ ಮುಚ್ಚುವ ಕೆಲಸ ಆಗಬೇಕು ಎನ್ನುವುದು ಜನರು ಅಪೇಕ್ಷೆಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.