PM Modi Manipur Visit | ಎರಡು ವರ್ಷಗಳ ಬಳಿಕ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ; ಇದು ಅಲ್ಲಿನ ಸಂತ್ರಸ್ತರಿಗೆ ಮಾಡಿದ ಅವಮಾನ ಎಂದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ!

PM Modi Manipur Visit
Published on

PM Modi Manipur Visit: ಪ್ರಧಾನಿ ನರೇಂದ್ರ ಮೋದಿ ಮಣಿಪುರ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಜನಾಂಗೀಯ ಹಿಂಸಾಚಾರದಿಂದ ಬಾಧಿತರಾದವರಿಗೆ ಮಾಡಿದ ಗಂಭೀರ ಅವಮಾನ ಎಂದು ಕರೆದಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​​ ಹಂಚಿಕೊಂಡಿರುವ ಖರ್ಗೆ, ಮಣಿಪುರದಲ್ಲಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿದ್ದರೂ ಎರಡು ವರ್ಷಗಳಿಗೂ ಹೆಚ್ಚು ಕಾಲ ಭೇಟಿ ನೀಡದ ಪ್ರಧಾನಿ, ಇಂದು ಇಂಫಾಲ ಮತ್ತು ಚುರಚಂದಪುರದಲ್ಲಿ ನಡೆಸಿದ ರೋಡ್ ಶೋ, ಪರಿಹಾರ ಶಿಬಿರಗಳಲ್ಲಿರುವ ಜನರ ಕೂಗು ಕೇಳಿ ಹೇಡಿತನದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ ಎಂದರು.

ಮೋದಿ ಸ್ವಾಗತ ಸಮಾರಂಭವನ್ನು ಟೀಕಿಸಿದ ಖರ್ಗೆ, ಇದು ಇನ್ನೂ ಬಳಲುತ್ತಿರುವವರ ಗಾಯಗಳಿಗೆ ಕ್ರೂರವಾಗಿ ಚುಚ್ಚಿದಂತಾಗುತ್ತದೆ, ಈ ಅವಧಿಯಲ್ಲಿ ಮೋದಿ 46 ವಿದೇಶ ಪ್ರವಾಸಗಳನ್ನು ಮಾಡಿರುವ ಪ್ರಧಾನಿಗೆ, ದೇಶದ ನಾಗರಿಕರೊಂದಿಗೆ ಸಹಾನುಭೂತಿಯನ್ನು ಹಂಚಿಕೊಳ್ಳಲು ಸಮಯ ಸಿಕ್ಕಿಲ್ಲ, ಬಿಕ್ಕಟ್ಟನ್ನು ನಿರ್ವಹಿಸುವ ವಿಷಯದಲ್ಲಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರ ಅಸಮರ್ಥತೆ ಎದ್ದು ಕಾಣುತ್ತಿದೆ ಎಂದು ಹೇಳಿದರು. 2002 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಗೆ ಅಟಲ್​​​ ಬಿಹಾರಿ ವಾಜಪೇಯಿ ಹೇಳಿದ್ದ ಮಾತನ್ನು ಉಲ್ಲೇಖಿಸಿದ ಖರ್ಗೆ, ರಾಜಕೀಯವನ್ನು ಮೀರಿ ಬಿಕ್ಕಟ್ಟಿನ ಸಮಯದಲ್ಲಿ ಸಾಂವಿಧಾನಿಕ ಕರ್ತವ್ಯವನ್ನು ಎತ್ತಿಹಿಡಿಯಬೇಕು ಎಂದರು.

ಪ್ರಿಯಾಂಕ ಗಾಂಧಿ ವಾದ್ರಾ ಟೀಕೆ..

ಹಿಂಸಾಚಾರ ನಡೆದು 2 ವರ್ಷಗಳ ನಂತರ ಮಣಿಪುರಕ್ಕೆ ಭೇಟಿ ನೀಡುವುದು ಯೋಗ್ಯವೆಂದು ಮೋದಿ ನಿರ್ಧರಿಸಿದಂತಿದೆ, ಅವರು ಬಹಳ ಹಿಂದೆಯೇ ಭೇಟಿ ನೀಡಬೇಕಿತ್ತು. ಅಲ್ಲಿ ನಡೆಯುತ್ತಿರುವ ಸಂಘರ್ಷ ಇಷ್ಟು ದಿನ ನಡೆಯಲು ಬಿಟ್ಟಿರುವುದು, ಇಷ್ಟೊಂದು ಜನರು ತಮ್ಮ ಪ್ರಾಣ ಕಳೆದುಕೊಳ್ಳಲು ಅವಕಾಶ ನೀಡಿರುವುದು ದುರದೃಷ್ಟಕರ. ಸ್ವಾತಂತ್ರ ಸಿಕ್ಕ ನಂತರ ಇಲ್ಲಿಯವರೆಗೆ, ದೇಶದಲ್ಲಿ ಯಾವುದೇ ಪಕ್ಷದ ಪ್ರಧಾನಮಂತ್ರಿ ಇರಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುತ್ತಿದ್ದರು ಆದರೆ ಮೋದಿ ಆ ಸಂಪ್ರದಾಯವನ್ನು ಮುರಿದಿದ್ದಾರೆ ಎಂದರು.

ಮೇ 2023 ರಲ್ಲಿ 200 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಜನಾಂಗೀಯ ಘರ್ಷಣೆಗಳ ನಂತರ ಪ್ರಧಾನಿ ಮೋದಿ ರಾಜ್ಯಕ್ಕೆ ಮೊದಲ ಬಾರಿ ಭೇಟಿ ನೀಡುತಿದ್ದಾರೆ. ಮಣಿಪುರದ ಭೇಟಿಯ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್, ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಚುರಚಂದ್‌ಪುರಕ್ಕೆ ಬಂದಿಳಿದು, ಸ್ಥಳಾಂತರಗೊಂಡವರನ್ನು ಭೇಟಿ ಮಾಡಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಎಂದು ತಿಳಿಸಿದರು.

ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದು, 67,000 ಜನರು ಸ್ಥಳಾಂತರಗೊಂಡರು ಮತ್ತು 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net