

KTR: ದೇಶದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸುವವರು, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಶಾಸಕರ ಕಳ್ಳತನ ಮಾಡೋದರ ಬಗ್ಗೆ ಪಿತೂರಿಯ ಭಾಗವಾಗಿ ಮೌನವಹಿಸಿದ್ದಾರೆ ಎಂದು ಶನಿವಾರ (ಸೆ.13) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೆಲಂಗಾಣ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್ನಲ್ಲಿ ಮಾತನಾಡಿರುವ ಕೆಟಿಆರ್, ರಾಹುಲ್ ಗಾಂಧಿಯವರು ರಾಷ್ಟ್ರ ರಾಜಕೀಯದಲ್ಲಿ ‘ವೋಟ್ ಚೋರಿ’ ವಿಷಯವನ್ನು ಪದೇ ಪದೇ ಎತ್ತುತ್ತಾರೆ. ಆದರೆ, ತೆಲಂಗಾಣದಲ್ಲಿ ನಡೆಯುತ್ತಿರುವ ‘ನಾಚಿಕೆಗೇಡಿನ ಎಂಎಲ್ಎ ಚೋರಿ’ಯ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ರಾಹುಲ್ ಗಾಂಧಿ ಈ ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನಬಾಹಿರ ಪದ್ಧತಿಯ ಬಗ್ಗೆ ನಾಚಿಕೆಪಡಬೇಕು. ಇದು ಅವರು ಮಾತನಾಡುವ ‘ವೋಟ್ ಚೋರಿ’ಗಿಂತಲೂ ಗಂಭೀರವಾದ ಅಪರಾಧವಾಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ಗೆ ಸೇರ್ಪಡೆಯಾದ ಹಲವಾರು ಶಾಸಕರು ಕಾಂಗ್ರೆಸ್ ಶಾಲು ಧರಿಸಿರುವುದನ್ನು ನೋಡಬಹುದು. ದೆಹಲಿಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಫೋಟೊಗೆ ಪೋಸ್ ಕೊಟ್ಟಿರುವ ಚಿತ್ರಗಳನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ನೀವೇ ಅವರಿಗೆ ಕಾಂಗ್ರೆಸ್ ಶಾಲು ಹೊದಿಸಿದಿರಿ, ಈಗ ಅವರು ಎಂದೂ ಪಕ್ಷ ಸೇರಿಲ್ಲ ಎಂದು ಹೇಳುತ್ತೀರಾ? ಈ ನಿರಾಕರಣೆಗೆ ನೀವು ಇನ್ನೂ ಬದ್ದರಾಗಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಇಂತಹ ಪಕ್ಷಾಂತರಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತವೆ. ಕಾಂಗ್ರೆಸ್ ಸರ್ಕಾರವು ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು, ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಅಸಂವಿಧಾನಿಕ ತಂತ್ರಗಳಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಆಡಳಿರೂಢ ಕಾಂಗ್ರೆಸ್ ಪಕ್ಷಕ್ಕೆ, ವಿಪಕ್ಷ ಬಿಆರ್ಎಸ್ನಿಂದ 10 ಮಂದಿ ಶಾಸಕರು ಪಕ್ಷಾಂತರಗೊಂಡಿದ್ದರು. ಈ ಕುರಿತು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಪಕ್ಷಾಂತರಗೊಂಡ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಕದ ತಟ್ಟಿದ್ದ ಬಿಆರ್ಎಸ್ ಪಕ್ಷಕ್ಕೆ ಸುಪ್ರೀಂಕೋರ್ಟ್ನಲ್ಲಿ ಬೆಂಬಲ ಸಿಕ್ಕಿತ್ತು.
ಬಿಆರ್ಎಸ್ ಪಕ್ಷದ 10 ಜನ ಶಾಸಕರ ಪಕ್ಷಾಂತರದ ಅನರ್ಹತೆಯು ಅರ್ಜಿ ವಿಚಾರಣೆ ನಡೆಸಿದ್ದ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ಪೀಠ, ಈ ಪಕ್ಷಾಂತರವನ್ನು ಖಂಡಿಸಿತ್ತು. ಪಕ್ಷಾಂತರವನ್ನು ನಿಯಂತ್ರಿಸದಿದ್ದರೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. ಮೂರು ತಿಂಗಳೊಳಗೆ ಪಕ್ಷಾಂತರಗೊಂಡ ಶಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ತೆಲಂಗಾಣ ವಿಧಾನಸಭೆ ಸ್ಪೀಕರ್ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. (ಏಜೆನ್ಸೀಸ್)