

ಬೆಂಗಳೂರು: ಬಿಜೆಪಿಯಲ್ಲಿ ಪಕ್ಷನಿಷ್ಠರು ಹಾಗೂ ಅಸಮಾಧಾನಿತರ ಬಣಸಮರ ರ್ತಾಕ ಅಂತ್ಯ ಸಮೀಪಿಸುವ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದರೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಾಟೀಸವಾಲಿನೊಂದಿಗೆ ಗೊಂದಲ ಉಲ್ಬಣ ಗೊಂಡಿದೆ. ಯತ್ನಾಳ್ ನಿರಂತರವಾಗಿ ಮಾಡು ತ್ತಿದ್ದ ಆರೋಪಗಳ ಬಗ್ಗೆ ಇಷ್ಟು ದಿನ ಸಾವಧಾನವಾಗಿದ್ದ ಬಿ.ವೈ.ವಿಜಯೇಂದ್ರ ಭಾನುವಾರ ಕೊನೆಗೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಗೊಡ್ಡು ಬೆದರಿಕೆಗೆ ಹೆದರಲ್ಲ, ಹೊಂದಾಣಿಕೆ ರಾಜಕೀಯದ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಇನ್ನೊಂದೆಡೆ ಯತ್ನಾಳ್, ತಮ್ಮ ಉಚ್ಛಾಟನೆ ಕುರಿತ ವರದಿಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಬರುತ್ತಿದ್ದರೂ, ಉಚ್ಚಾಟಿಸುತ್ತಿಲ್ಲ ಯಾಕೆ ಎಂದು ಟಾಂಗ್ ನೀಡಿದ್ದಾರೆ. ನನ್ನ ಭವಿಷ್ಯದ ಬಗ್ಗೆ ಯಾರಿಗೂ ಚಿಂತೆ ಬೇಡ. ನಾನು ಕರ್ನಾಟಕದಲ್ಲಿ ಮುಂದೆ ನಂ.1 ಆಗುತ್ತೇನೆ. ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ವಿಜಯೇಂದ್ರ ಪರ ಇರುವ ಪಕ್ಷನಿಷ್ಠ ಶಾಸಕರು, ಮುಖಂಡರು ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಸಭೆ ಸೇರಿ, ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು. ಡಿ.12ರಂದು ದೆಹಲಿಗೆ ನಿಯೋಗ ತೆರಳಿ ಯತ್ನಾಳ್ ವಿರುದ್ಧ ಶಿಸ್ತುಕ್ರಮಕ್ಕೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ಪಕ್ಷ ನಿಷ್ಠ ಮುಖಂಡರು ಮುಂದಾಗಿದ್ದು, ಈ ಕುರಿತು ದಾವಣಗೆರೆಯಲ್ಲಿ ಡಿ.10ರಂದು ಸಭೆ ಸೇರಿ ರ್ಚಚಿಸುವ ಸಾಧ್ಯತೆಗಳಿವೆ. ಇನ್ನೊಂದೆಡೆ ಯತ್ನಾಳ್, ರಮೇಶ ಜಾರಕಿಹೊಳಿ ಮೊದಲಾದ ಮುಖಂಡರು ಬೆಳಗಾವಿಯಲ್ಲಿ ಗೌಪ್ಯ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ರ್ಚಚಿಸಿದರು.
ಬೆದರಿಕೆ ನಡೆಯುವುದಿಲ್ಲ: ಗೊಂದಲ ಸೃಷ್ಟಿಸಿ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂಬ ಆಸೆಯಿಟ್ಟುಕೊಂಡಿದ್ದರೆ ಈಡೇರಲ್ಲ. ಹಾದೀಲಿ ಬೀದೀಲಿ ಮಾತನಾಡಿ ಗೊಡ್ಡು ಬೆದರಿಕೆ ಹಾಕಿದರೆ ನಡೆಯಲ್ಲವೆಂದು ಶಾಸಕ ಯತ್ನಾಳ್ಗೆ ವಿಜಯೇಂದ್ರ ಪರೋಕ್ಷವಾಗಿ ಟಾಂಗ್ ನೀಡಿದರು.
ಹೊಂದಾಣಿಕೆ ರಾಜಕಾರಣದ ವಿಡಿಯೋ, ದಾಖಲೆಗಳಿದ್ದರೆ, ಯಾವುದೇ ಮುಹೂರ್ತ ಅಥವಾ ಘಳಿಗೆಗೆ ಕಾಯದೆ ತಕ್ಷಣ ಬಿಡುಗಡೆ ಮಾಡುವಂತೆ ಯತ್ನಾಳ್ರಿಗೆ ಮನವಿ ಜತೆಗೆ ಆಗ್ರಹವನ್ನೂ ಮಾಡುತ್ತೇನೆ ಎಂದು ಸವಾಲು ಹಾಕಿದರು. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನನ್ನ ವಿರುದ್ಧ ಪದೇಪದೆ ಹೊಂದಾಣಿಕೆ ರಾಜಕೀಯದ ಗೂಬೆ ಕೂರಿಸಿ ಪಕ್ಷದ ಸಂಘಟನೆಗೆ ಪೆಟ್ಟು ನೀಡುವುದು ಬೇಡ. ಅದೇನೇ ದಾಖಲೆಗಳಿದ್ದರೂ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ನಾಯಕರ ಬಗ್ಗೆ ಹಾದೀಲಿ, ಬೀದೀಲಿ ಹಗುರ ಮಾತು, ಟೀಕೆ-ಟಿಪ್ಪಣಿ ಮಾಡುವವರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎನ್ನುವುದು ಕಾರ್ಯಕರ್ತರ ಅಪೇಕ್ಷೆಯಾಗಿದೆ. ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿದ ವೇಳೆ ಯತ್ನಾಳ್ ವಿರುದ್ಧ ಚಾಡಿ ಹೇಳಿಲ್ಲ. ಅದರ ಅಗತ್ಯವೂ ನನಗಿಲ್ಲ. ಯತ್ನಾಳ್ ಜತೆಗಿರುವ ಎಲ್ಲರೂ ಯಡಿಯೂರಪ್ಪ ಅಥವಾ ವಿಜಯೇಂದ್ರ ವಿರೋಧಿಗಳಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಅಡ್ಡಿಯಾಗಿದ್ದಕ್ಕೆ ಬೇಸರ: ರಾಜ್ಯ ಸರ್ಕಾರದ ವೈಫಲ್ಯ, ಮುಡಾ ಅಕ್ರಮ ಹಾಗೂ ವಾಲ್ಮೀಕಿ ನಿಗಮದ ಹಗರಣ ಮುಂದಿಟ್ಟುಕೊಂಡು ಯಶಸ್ವಿ ಹೋರಾಟ ಸಂಘಟಿಸಿ ಸರ್ಕಾರದ ಕೈಕಟ್ಟಿ ಹಾಕಿದ್ದೆವು. ಆದರೆ ಕೆಲವರು ಸ್ವಾರ್ಥಕ್ಕಾಗಿ ಅಡ್ಡಿಯಾಗಿದ್ದಕ್ಕೆ ಕಾರ್ಯಕರ್ತರಲ್ಲಿ ಬೇಸರವಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸೋತಿದ್ದಕ್ಕೆ ಕಾರ್ಯಕರ್ತರು ನೊಂದಿದ್ದಾರೆ. ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರು ಇದನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಪಕ್ಷದ ಸಂಘಟನಾ ಪರ್ವ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಘಟನೆ ಜತೆ ಕೈಜೋಡಿಸಬೇಕು ಎಂದು ಅತೃಪ್ತರ ಗುಂಪಿಗೆ ಚಾಟಿ ಬೀಸುತ್ತಲೇ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
ಇಂದು ದೆಹಲಿಗೆ: ವಕ್ಪ್ ಮಂಡಳಿ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಮಾಡಿ, ಈಗ ಕಿತ್ತೂರು ಕರ್ನಾಟಕಕ್ಕೆ ಬಂದಿದ್ದೇವೆ. ಸೋಮವಾರ ದೆಹಲಿಗೆ ತೆರಳಿ, ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗುತ್ತೇವೆ. ಮಠ, ಮಂದಿರದ ಆಸ್ತಿಗೆ ವಕ್ಪ್ ಮಂಡಳಿ ಹೆಸರು ಸೇರ್ಪಡೆಯಾದ ಕುರಿತು ವರದಿ ಕೊಡುತ್ತೇವೆ ಎಂದು ಯತ್ನಾಳ್ ಹೇಳಿದರು.