

ಬೆಂಗಳೂರು: ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಆರು ದಿನಗಳು ಕಳೆದವು. ಇಂದಿಗೂ ಅವರಿಲ್ಲ ಎಂಬುದನ್ನು ನಂಬಲು ಆಗದಿದ್ದರೂ, ಅವರ ಸಾವು ಮಾತ್ರ ಕಣ್ಣಿಗೆ ಕಟ್ಟಿದಂತಿದೆ. ಇಡೀ ಕುಟುಂಬ ದುಃಖದಲ್ಲಿ ಮುಳುಗಿದರೆ, ಚಿತ್ರರಂಗ ಪ್ರತಿಭಾವಂತ ಯುವನಟನನ್ನು ಕಳೆದುಕೊಂಡಿದೆ. ಕರುನಾಡು, ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುತ್ತಿದೆ. ಹೀಗಿರುವಾಗಲೇ ಅಣ್ಣನನ್ನು ಕಳೆದುಕೊಂಡಿರುವ ಧ್ರುವ, ನೀನಿಲ್ಲದೆ ಇರಲು ಆಗುತ್ತಿಲ್ಲ. ಬೇಗ ಬಂದು ಬಿಡು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಳೇ ಫೋಟೋ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ.
ಹೌದು, ಸಾವಿಗೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ನಟ ಚಿರು ಸರ್ಜಾ, ಸೂರಜ್ ಸರ್ಜಾ, ಧ್ರುವ ಸರ್ಜಾ ಒಟ್ಟಿಗೆ ಇರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಆ ಫೋಟೋ ಎಲ್ಲೆಡೆ ವೈರಲ್ ಆಗುವುದರ ಜತೆಗೆ ತ್ರಿವಳಿ ಜೋಡಿಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಬಳಿಕ ಚಿರು ಸಾವಿನ ನಂತರ ಅದೇ ಫೋಟೋವನ್ನು ಸಂಬಂಧಿ ಸೂರಜ್ ಸಹ ಹಂಚಿಕೊಂಡು ಚಿರು ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದರು. ಇದೀಗ ಧ್ರುವ, ಅಣ್ಣನ ಸಾವನ್ನು ಅರಗಿಸಿಕೊಳ್ಳದ ಸ್ಥಿತಿಗೆ ಜಾರಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ‘ನೀ ನನಗೆ ಮರಳಿ ಬೇಕು, ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಆಗದು. ನೀನಿಲ್ಲದೆ ನಾನು ಹೇಗಿರಲಿ?’ ಎಂದಿದ್ದಾರೆ.
ಅಣ್ಣನ ನಿಧನವಾದ ಬಳಿಕ ಈವರೆಗೂ ಒಂದೇ ಒಂದು ಮಾತನ್ನೂ ಆಡದ ಧ್ರುವ, ಇದೀಗ ಇನ್ಸ್ಟಾ ಪೋಸ್ಟ್ ಮೂಲಕ ತಮ್ಮೊಳಗಿನ ನೋವನ್ನು ಹೊರಹಾಕಿದ್ದಾರೆ. ಅಣ್ಣನ ಅನುಪಸ್ಥಿತಿ, ಮೇಘನಾ ಕಣ್ಣೀರು, ಕುಟುಂಬಕ್ಕೆ ಆದ ನೋವು.. ಇದೆಲ್ಲದರ ಜತೆ ಮುಂದೇನು ಎಂಬ ಪ್ರಶ್ನೆಯೂ ಅವರ ಮುಂದಿದೆ.