More

    ಚಿರು ಯಾವತ್ತೂ ಚಿರಂಜೀವಿನೇ!; ಹರಿಪ್ರಿಯಾ ಬರೆದರು ಸುದೀರ್ಘ ಪತ್ರ …

    ಸಂಹಾರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯಾ ಮೊದಲ ಬಾರಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಈ ಜೋಡಿ ಮತ್ತೆ ಒಂದಾಗಲಿಲ್ಲ ಎಂಬುದಕ್ಕಿಂತ ಆ ಥರದ ಕಾಂಬಿನೇಷನ್​ ಕಥೆಗಳು ಇವರಿಬ್ಬರ ಬಳಿ ಬರಲಿಲ್ಲ. ಆದರೆ, ಚಿರು ಜತೆ ನಟಿಸಿದ ಒಂದೇ ಸಿನಿಮಾದಲ್ಲಿ ಅವರ ಬಗ್ಗೆ ತಿಳಿದುಕೊಂಡಿದ್ದರು ಹರಿಪ್ರಿಯಾ. ಚಿತ್ರದಲ್ಲಿ ಇಬ್ಬರ ಸ್ಕ್ರೀನ್​ ಸ್ಪೇಸ್​ ಕಡಿಮೆ ಇದ್ದರೂ, ಸೆಟ್​ನಲ್ಲಿ ಒಟ್ಟಿಗೆ ಒಳ್ಳೆಯ ಸಮಯವನ್ನು ಕಳೆದಿದ್ದಾರೆ. ಚಿತ್ರರಂಗದಲ್ಲಿ ಇದೀಗ ಅವರ ಅನುಪಸ್ಥಿತಿಯನ್ನು ಕಂಡು ಮೌನಕ್ಕೆ ಜಾರಿದ್ದಾರೆ. ಅವರ ಜತೆ ಕಳೆದ ಕ್ಷಣಗಳನ್ನು ಬೇಬ್​ ನೋಸ್​ ಬ್ಲಾಗ್​ನಲ್ಲಿ ಮೆಲುಕುಹಾಕಿದ್ದಾರೆ.

    ಭಾನುವಾರ ನನ್ನ ಆಪ್ತರಿಂದ ಒಂದು ಮೆಸೇಜ್ ಬಂದಿತ್ತು. ನಾನ್ ಅದನ್ನ ನಾಲ್ಕೈದ್ ಸಲ ಓದ್ದೆ. ಯಾಕಂದ್ರೆ ಆ ಮೆಸೇಜ್‌ನ ನಂಗೆ ನಂಬೋಕ್ ಸಾಧ್ಯನೇ ಆಗ್ಲಿಲ್ಲ. ನಾನೇ ಏನಾದ್ರೂ ತಪ್ ಓದಿದ್ನ ಅಂತನ್ಸಿ ಮತ್ತೆ ಮತ್ತೆ ಓದ್ಕೊಂಡೆ. ಅಷ್ಟರಲ್ಲಿ ಬೇರೆಬೇರೆ ಕಡೆಯಿಂದ್ಲೂ ಅದೇ ಮೆಸೇಜ್ ಬರ್ತಿತ್ತು, ಟಿವಿಲೂ ಅದೇ ಬ್ರೇಕಿಂಗ್ ನ್ಯೂಸ್. “ಚಿರು ಇನ್ನಿಲ್ಲ..” ಅನ್ನೋ ಸುದ್ದಿ ಇನ್ನೂ ಪೂರ್ತಿಯಾಗಿ ನಂಬೋಕ್ ಆಗಲ್ಲ.
    ಚಿರು ಮಾತ್ರ ಅಲ್ಲ, ಅವ್ರ ಫ್ಯಾಮಿಲಿ ಎಲ್ರ ಜೊತೆ ಆ್ಯಕ್ಟ್ ಮಾಡಿದೀನಿ. ನಾನು ಚಿರು ‘ಸಂಹಾರ’ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ವಿ. ಅಲ್ಲಿ ಹೀರೋಯಿನ್ /ವಿಲನ್ ರೋಲ್. ಸೋ.. ನಂಗೂ ಚಿರುಗೂ ಒಟ್ಟಿಗೆ ಇರೋ ಸೀನ್ಸ್ ಜಾಸ್ತಿ ಇರ್ಲಿಲ್ಲ. ಆದ್ರೆ ಸಾಂಗ್ ಶೂಟ್‌ನಲ್ಲಿ ನಾವಿಬ್ರೂ ತುಂಬಾ ಮಾತಾಡಿದ್ದು, ನಕ್ಕಿದ್ದು ಇದೆ. ಅದ್ರಲ್ಲಿ ಕೊನೇಲೊಂದು ಫೈಟ್ ಇತ್ತು. ಆಗ ಒಂದು ಪಲ್ಟಿ ಹೊಡೆಯುವಾಗ ಆಯತಪ್ಪಿ ದಡ್ ಅಂತ ನೆಲಕ್ಕೆ ಬಿದ್ದು ‘ಅಮ್ಮಾ..’ ಅಂತ ಕಿರುಚಿದ್ದೆ. (ಸ್ವಲ್ಪ ಹೆಚ್ಚುಕಡಿಮೆ ಆಗಿದ್ರೂ ಬ್ಯಾಕ್‌ಬೋನ್‌ಗೆ ಏಟಾಗಿರ್ತಿತ್ತು). ಆವಾಗಿಂದ ಶೂಟಿಂಗ್ ಮುಗಿಯೋವರೆಗೂ ನಾನ್ ಕಿರುಚಿದ್ ಟೋನ್‌ನಲ್ಲೇ ‘ಅಮ್ಮಾ..’ ಅಂತ ರೇಗಿಸ್ತಿದ್ರು ಚಿರು.

    ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

    ಚಿರು ಇಲ್ಲ ಅಂದ್ ತಕ್ಷಣ ಶಾಕ್ ಆಗಿತ್ತು. ಭಾನುವಾರ ಟಿವಿಲಿ ನೋಡ್ತ ಮನೆಯಲ್ಲೇ ತುಂಬಾ ಅತ್ತಿದ್ದೆ, ಚಿರುನ ಹಾಗೆ ಹೇಗೆ ನೋಡೋದು ಅಂತ ಹೋಗೋಕೆ ಹಿಂಜರಿದೆ. ಸೋಮವಾರ ಕೊನೆದಾಗಿ ಒಂದ್ಸಾರಿ ನೋಡ್ಬೇಕು ಅಂತ ತಕ್ಷಣ ಹೊರಟೆ. ಆದ್ರೆ ಅಲ್ಲಿ ಮೇಘನಾನ ಕಂಡು ನಂಗೆ ಇನ್ನೂ ಜಾಸ್ತಿ ದುಃಖ ಆಯ್ತು. ಏನ್ ಸಮಾಧಾನ ಹೇಳೋಕೂ ಮಾತೇ ಹೊರಡ್ತಿರ್ಲಿಲ್ಲ. ಅಲ್ಲಿ ಯಾರೋ ಹೇಳ್ತಿದ್ರು, ಮೇಘನಾ ಕ್ಯಾರಿಂಗ್ ವಿಷಯಾನ ಚಿರು ಇನ್ ಸ್ವಲ್ಪದಿನದಲ್ಲೇ ಪಬ್ಲಿಕ್ ಮಾಡ್ತಿದ್ರು ಅಂತ. ಆದ್ರೆ ಅಷ್ಟರಲ್ಲಿ ಏನೇನಾಯ್ತಲ್ಲ? ಲೈಫ್ ಎಷ್ಟ್ ಅನ್‌ಪ್ರೆಡಿಕ್ಟೇಬಲ್ ಅಲ್ವಾ. ಒಬ್ರ ಸ್ಥಾನನ ಇನ್ನೊಬ್ರು ಯಾವತ್ತೂ ತುಂಬೋಕ್ ಆಗಲ್ಲ.
    ಇನ್ನು ಅರ್ಜುನ್ ಸರ್.. ಕಾಫೀನ್ ಬಾಕ್ಸ್ ಗ್ಲಾಸ್‌ಗೆ ತಲೆ ಕೊಟ್ಟು, “ಚಿರು.. ಮಾಮ ಬಂದಿದಿನಿ, ಎದ್ದೇಳೋ..” ಅಂದಿದ್ನ ನೋಡ್ದಾಗಂತೂ ತುಂಬಾ ಸಂಕಟ ಆಗಿತ್ತು. ಬೆಳೆದು ನಿಂತಿರೋ ಮಗನ್ನ ಕಳ್ಕೊಂಡಿರೋ ಸಂಕಟದಲ್ಲಿರೋ ಅಪ್ಪ-ಅಮ್ಮಂಗೆ ಯಾವ ಸಾಂತ್ವನ ಸಮಾಧಾನ ನೀಡೋಕ್ ಸಾಧ್ಯ? ಚಿಕ್ಕೋರಿದ್ದಾಗಿಂದ ಒಟ್ಟಿಗೇ ಆಡಿ ಬೆಳೆದ ಧ್ರುವಂಗೆ ಆಗಿರೋ ಕಷ್ಟ ಯಾರಾದ್ರೂ ಊಹಿಸೋಕ್ ಸಾಧ್ಯನಾ? ಈ ಲಾಕ್‌ಡೌನ್ ಟೈಮಲ್ಲಿ ಎಲ್ಲ ಮನೇಲೇ ಇದ್ದು ಎಂದಿಗಿಂತ ಜಾಸ್ತಿ ಸಮಯ ಒಟ್ಟಿಗೇ ಕಳೆದಿರ್ತಾರೆ. ಆದ್ರೆ ಈ ಟೈಮಲ್ಲೇ ಹೀಗಾಯ್ತಲ್ಲ..

    ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ

    ನಾನಲ್ಲ.. ಯಾರೇ ಆದ್ರೂ ಸಾಂತ್ವನ ಹೇಳೋದ್ ಬಿಟ್ಟು ಬೇರೇನೂ ಮಾಡೋಕಾಗಲ್ಲ. ಮೇಘನಾಗೆ, ಅವ್ರ ಅಮ್ಮ-ಅಪ್ಪಂಗೆ, ಅರ್ಜುನ್ ಸರ್ ಗೆ, ಧ್ರುವಂಗೆ , ಅವ್ರೆಲ್ರಿಗೂ ದುಃಖ ಸಹಿಸ್ಕೊಳೋ ಶಕ್ತಿ ಕೊಡು ದೇವ್ರೇ ಅಂತ ಪ್ರಾರ್ಥನೆ ಮಾಡೋಣ. ಹೋದವರು ಹೋದಾಗ ಆಗೋ ನೋವಿಗಿಂತ ಆಮೇಲೆ ಅವ್ರ ನೆನಪಾಗಿ ಆಗೋ ನೋವಿದ್ಯಲ ಅದೇ ದೊಡ್ಡ ಯಾತನೆ. ಅದನ್ನು ಸಹಿಸ್ಕೊಳ್ಳೋ ಶಕ್ತಿ ಚಿರು ಫ್ಯಾಮಿಲಿಗೆ ದೇವ್ರು ಕೊಡ್ಲಿ..
    ಚಿರು ಸಿನಿಮಾಗಳು ರಿಲೀಸ್ ಆಗೋದಿವೆ. ಇನ್ನೂ ತುಂಬಾ ಸಿನಿಮಾ ಮಾಡೋದಿತ್ತು. ಆದ್ರೆ ಚಿರು ಇಲ್ಲ ಅನ್ನೋದ್ನ ನಂಗಿನ್ನೂ ನಂಬೋಕೇ ಆಗ್ತಿಲ್ಲ. ನೋಡೋಕೆ, ಮಾತಾಡೋಕೆ , ರೇಗ್ಸೋಕೆ ಚಿರು ಇನ್ನು ಕಾಣಿಸದೇ ಇರ್ಬೋದು. ಆದ್ರೆ ಎಲ್ಲರ ಮನಸಲ್ಲಿ ಚಿರು ಯಾವತ್ತೂ ಚಿರಂಜೀವಿನೇ..

    ಆ ಪಾತ್ರ ನಾನೇ ಮಾಡಬೇಕೆಂದಿದ್ದರಂತೆ ಚಿರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts