ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾಗಿ ಈ ಜೂನ್ 07ಕ್ಕೆ ಮೂರು ವರ್ಷಗಳಾಗಿವೆ. ಈ ಮಧ್ಯೆ, ಅವರು ನಟಿಸಿದ ಕೊನೆಯ ಚಿತ್ರವಾದ ‘ರಾಜ ಮಾರ್ತಾಂಡ’ ಇದೇ ತಿಂಗಳು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಇನ್ಸ್ಟಾಗ್ರಾಂಗೆ ಕಾಲಿಟ್ಟ ದಳಪತಿ; ಒಂದೇ ಗಂಟೆಯಲ್ಲಿ 5 ಲಕ್ಷ ಫಾಲೋವರ್ಸ್!
ಚಿರಂಜೀವಿ ಸರ್ಜಾ 2020ರಲ್ಲಿ ಹೃದಯಾಘಾತದಿಂದ ನಿಧನರಾಗುವ ಮುನ್ನ ‘ರಾಜ ಮಾರ್ತಾಂಡ’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಆದರೆ, ಡಬ್ಬಿಂಗ್ ಮಾತ್ರ ಆಗಿರಲಿಲ್ಲ. ಕಳೆದ ವರ್ಷ, ಚಿರು ಸಹೋದರ ಧ್ರುವ ಸರ್ಜಾ ಡಬ್ಬಿಂಗ್ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ಈ ಹಿಂದೆ ಶಂಕರ್ ನಾಗ್ ನಿಧನರಾದಾಗ ಅವರ ಚಿತ್ರವೊಂದರಲ್ಲಿನ ಅವರ ಪಾತ್ರಕ್ಕೆ ಅನಂತನಾಗ್ ಹಾಗೂ ‘ಜೇಮ್ಸ್’ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರ ಪಾತ್ರಕ್ಕೆ ಶಿವರಾಜಕುಮಾರ್ ಡಬ್ಬಿಂಗ್ ಮಾಡಿದ್ದರು. ಈಗ ‘ರಾಜಮಾರ್ತಂಡ’ ಚಿತ್ರದ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.
ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಇದೇ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ಈ ಚಿತ್ರವನ್ನು ಶಿವಕುಮಾರ್ ನಿರ್ಮಿಸಿದರೆ, ಕೆ. ರಾಮನಾರಾಯಣ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಧರ್ಮವಿಶ್ ಹಿನ್ನೆಲೆ ಸಂಗೀತ ಹಾಗೂ ಕೆ.ಗಣೇಶ್ ಛಾಯಾಗ್ರಹಣವಿದೆ.
ಇದನ್ನೂ ಓದಿ: ಮಾಯಾವಿ ಯಾರು? ‘ಶಿವಾಜಿ ಸುರತ್ಕಲ್ 2’ ಟ್ರೇಲರ್ ಬಿಡುಗಡೆ …
‘ರಾಜ ಮಾರ್ತಾಂಡ’ನಾಗಿ ಚಿರಂಜೀವಿ ಸರ್ಜಾ ಅಭಿನಯಸಿದ್ದು, ಮಿಕ್ಕಂತೆ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ ರಾವ್, ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ನಟಿಸಿದ್ದಾರೆ.