

ಓಸ್ಲೋ: ವಿಶ್ವಾದ್ಯಂತ ಕರೊನಾ ಲಸಿಕೆ ವಿತರಣೆ ಆರಂಭಿಸಲಾಗಿದೆ. ಆದರೆ ಅಘಾತಕಾರಿ ಎನ್ನುವಂತೆ ನಾರ್ವೆಯಲ್ಲಿ ಫೈಜರ್ ಸಂಸ್ಥೆಯ ಕರೊನಾ ಲಸಿಕೆ ವಿತರಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಲಸಿಕೆ ಪಡೆದ 23 ವೃದ್ಧರು ಮೃತ ಪಟ್ಟಿದ್ದಾರೆ.
ಫೈಜರ್ ಲಸಿಕೆಯನ್ನು ನಾರ್ವೆಯ 30 ಸಾವಿರ ಜನರಿಗೆ ಕೊಡಲಾಗಿದೆ. ಅದರಲ್ಲಿ 80 ವರ್ಷ ಮೇಲ್ಪಟ್ಟವರೂ ಇದ್ದಾರೆ. ಅವರ ಪೈಕಿ 23 ಜನರು ಲಸಿಕೆ ಪಡೆದ ಕೆಲ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಹಾಗಿದ್ದರೂ ಅವರ ಸಾವಿಗೆ ಲಸಿಕೆಯೇ ನೇರ ಕಾರಣ ಎನ್ನುವುದು ಇನ್ನೂ ದೃಢವಾಗಿಲ್ಲ. ಆದರೆ ಮೃತರಲ್ಲಿ 13 ಜನರು ಲಸಿಕೆ ಪಡೆದ ಸ್ವಲ್ಪ ಸಮಯದಲ್ಲಿ ವಾಂತಿ, ಜ್ವರ, ಅಲರ್ಜಿಯಂತಹ ಸಾಮಾನ್ಯ ತೊಂದರೆಗೆ ಒಳಗಾಗಿದ್ದಾಗಿ ತಿಳಿಸಲಾಗಿದೆ. ಈ 23 ಜನರಷ್ಟೇ ಅಲ್ಲದೆ ಇನ್ನೂ ಕೆಲವರು ಇಂತಹ ತೊಂದರೆಗಳಿಂದ ಬಳಲುತ್ತಿರುವುದಾಗಿ ಹೇಳಲಾಗಿದೆ.
ನಾರ್ವೆಯಲ್ಲಿ ಇಂತದ್ದೊಂದು ಸಮಸ್ಯೆ ಕಂಡುಬಂದ ನಂತರ ಫೈಜರ್ ಸಂಸ್ಥೆ, ದೇಶಕ್ಕೆ ವಿತರಣೆ ಮಾಡಬೇಕಿದ್ದ ಲಸಿಕೆಯ ಸಂಖ್ಯೆಯನ್ನು ಕಡಿಮೆ ಮಾಡಿದೆ. 80 ವರ್ಷ ಮೇಲ್ಪಟ್ಟವರಲ್ಲಿ ಕಡಿಮೆ ಆಯಸ್ಸು ಉಳಿದಿರುತ್ತದೆ. ದೈಹಿಕವಾಗಿ ಕುಗ್ಗಿರುವ ಅವರಿಗೆ ಕರೊನಾ ಲಸಿಕೆ ಕೊಡುವಾಗ ವೈದ್ಯರು ಅತ್ಯಂತ ಎಚ್ಚರದಿಂದಿರಬೇಕು ಎಂದು ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.
ಈವರೆಗೆ ಲಸಿಕೆ ಪಡೆದವರಲ್ಲಿ 21 ಮಹಿಳೆಯರು ಮತ್ತು ಎಂಟು ಪುರುಷರಲ್ಲಿ ಅಡ್ಡ ಪರಿಣಾಮಗಳು ಕಂಡುಬಂದಿದೆ. ಸಾವನ್ನಪ್ಪಿರುವವರಲ್ಲದೆ, ಒಂಬತ್ತು ಜನರಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಅದರಿಂದ ಜೀವಕ್ಕೆ ಹಾನಿಯಿಲ್ಲ. ಏಳು ಜನರಲ್ಲಿ ಸ್ವಲ್ಪ ಪ್ರಮಾಣದ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಉಳಿದ ಒಂಬತ್ತು ಜನರಲ್ಲಿ ಅಲರ್ಜಿಯಂತಹ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ನಾರ್ವೆ ಸರ್ಕಾರ ವೈದ್ಯಕೀಯ ವರದಿಯಲ್ಲಿ ತಿಳಿಸಿದೆ. (ಏಜೆನ್ಸೀಸ್)