ದಸರಾ ಧಮಾಕಾ: ಖೈದಿಗಳಿಗೆ 4 ದಿನ ಭರ್ಜರಿ ಮಾಂಸದೂಟ! ಮೆನು ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ

non veg food
Published on

ಯಾವುದೋ ಒಂದು ದೊಡ್ಡ ತಪ್ಪಿನಿಂದ ಜೈಲುಪಾಲಾಗುವ ಖೈದಿಗಳು (Prisoners), ಒಂದು ಸಣ್ಣ ಬೆಳಕಿನಡಿ, ನಾಲ್ಕು ಗೋಡೆಗಳ ಮಧ್ಯೆ ಸೆರೆಮನೆ ವಾಸ ಅನುಭವಿಸಬೇಕಿರುತ್ತದೆ. ಇದು ಪ್ರತಿಯೊಂದು ಜೈಲಿನ ಮೂಲ ನಿಯಮ. ಇಲ್ಲಿ ಯಾವ ಐಷಾರಾಮಿ ಜೀವನ, ಭರ್ಜರಿ ಊಟ, ಉತ್ತಮ ಸೌಕರ್ಯ, ಸೌಲಭ್ಯಗಳು ಇರುವುದಿಲ್ಲ. ಜಗತ್ತಿನ ಮೂಲೆ ಮೂಲೆಯಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತಿವೆ ಎಂಬುದರ ಅರಿವಿರುವುದಿಲ್ಲ. ಖುಷಿ, ಆನಂದದ ಕ್ಷಣಕ್ಕೆ ಜಾಗವಿರುವುದಿಲ್ಲ. ಹೀಗಿರುವಾಗ ಈ ಒಂದು ಸರ್ಕಾರ ತಮ್ಮ ರಾಜ್ಯದಲ್ಲಿರುವ ಜೈಲಿನ ಖೈದಿಗಳಿಗೆ ದಸರಾ ಹಬ್ಬದ ಪ್ರಯುಕ್ತ ನಾಲ್ಕು ದಿನಗಳ ಕಾಲ ಭರ್ಜರಿ ಮಾಂಸದೂಟದ (Non Veg Dishes) ಮೆನು ಪರಿಚಯಿಸಿದೆ. ಈ ಸುದ್ದಿ ಖೈದಿಗಳಲ್ಲಿ ಹಬ್ಬದ ಆನಂದ, ಕಳೆ ತಂದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

4 ದಿನಗಳು ಭರ್ಜರಿ ಮಾಂಸದೂಟ

ದುರ್ಗಾಪೂಜೆ ಸಂದರ್ಭದ ಹಿನ್ನೆಲೆ ಜೈಲು ಖೈದಿಗಳಿಗೆಂದೇ ಹೊಸ ಬದಲಾವಣೆ ತಂದಿರುವ ಪಶ್ಚಿಮ ಬಂಗಾಳ ಸರ್ಕಾರ, ಈ ವರ್ಷದ ದುರ್ಗಾಪೂಜೆ ಆಚರಣೆಯಲ್ಲಿ ಖೈದಿಗಳಿಗೆ ರುಚಿಕರವಾದ ಊಟ ನೀಡಲು ನಿರ್ಧರಿಸಿದೆ. ದುರ್ಗಾ ಮಾತೆಯ ಪೂಜೆಯ ದಿನ ಇಡೀ ರಾಜ್ಯವೇ ಖುಷಿಯಿಂದ ಹಬ್ಬವನ್ನು ಸಂಭ್ರಮಿಸುತ್ತದೆ. ಈ ಸಮಯದಲ್ಲಿ ಖೈದಿಗಳು ಕೂಡ ಸಂತೋಷವಾಗಿರಲಿ ಎಂಬ ಉದ್ದೇಶದಿಂದ ಮಮತಾ ಬ್ಯಾನರ್ಜಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ಮೆನು ಇದೇ ಅಕ್ಟೋಬರ್ 9ರಿಂದ 12 ರವರೆಗೆ ಇರಲಿದೆ. ಈ ಆಹಾರ ಪದಾರ್ಥಗಳನ್ನು ಸ್ವತಃ ಖೈದಿಗಳೇ ತಯಾರಿಸುತ್ತಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪ್ರತಿ ವರ್ಷ ದಸರಾ ಹಬ್ಬದಂದು ಖೈದಿಗಳಿಗೆ ಉತ್ತಮ ಆಹಾರ ನೀಡಲಾಗುವುದು. ಈ ವೇಳೆ ಅವರಲ್ಲಿ ಯಾರಿಗೂ ಕೂಡ ಬಲವಂತವಾಗಿ ಆಹಾರ ನೀಡುವುದಿಲ್ಲ. ಅವರವರ ಧರ್ಮದ ಪ್ರಕಾರ ಅವರಿಗೆ ಇಷ್ಟವಾದ ಆಹಾರವನ್ನೇ ನೀಡುತ್ತೇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೆನುವಿನಲ್ಲಿರುವ ಭಕ್ಷ್ಯಗಳು:

  • ಮಟನ್ ಬಿರಿಯಾನಿ
  • ಚಿಕ್ಕನ್ ಕರಿ
  • ಬಸಂತಿ ಪುಲಾವ್
  • ಪೊಟೋಲ್ ಚಿಂಗ್ರಿ
  • ಮೀನಿನ ತಲೆ, ಮಲಬಾರ್ ಪಾಲಕ್​
  • ಬಂಗಾಳಿ ಗಂಜಿ
  • ಸಿಗಡಿ, ಸೋರೆಕಾಯಿ ಪಲ್ಯ, ಆಲೂಗಡ್ಡೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net