ಲಸಿಕೆ ತೆಗೆದುಕೊಳ್ಳದಿದ್ದರೆ ಸಂಬಳವಿಲ್ಲ : ಸಿಬ್ಬಂದಿಗೆ ಅಧಿಕಾರಿಯ ಎಚ್ಚರಿಕೆ !

vacc
Published on

ರಾಯ್ಪರ್​ : ಛತ್ತೀಸಗಢದ ಆದಿವಾಸಿ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಗೌರೆಲ-ಪೇಂದ್ರ-ಮರವಾಹಿ ಜಿಲ್ಲೆಯ ಅಸಿಸ್ಟೆಂಟ್​ ಕಮಿಷನರ್​ ಕೆ.ಎಸ್​.ಮಾಸ್ರಾಮ್ ಅವರು, 'ಇಲಾಖೆಯ ಎಲ್ಲಾ ಸಿಬ್ಬಂದಿ ಕೂಡಲೇ ಕರೊನಾ ಲಸಿಕೆ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ತಿಂಗಳ ಸಂಬಳ ತಡೆಹಿಡಿಯಲಾಗುವುದು' ಎಂದು ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿದೆ.

ಮೇ 21 ರಂದು ಹೊರಡಿಸಿರುವ ಈ ಆದೇಶದಲ್ಲಿ ಜಿಲ್ಲೆಯ ಆದಿವಾಸಿ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಕಛೇರಿಗಳು, ಆಶ್ರಮ್​ಗಳು (ವಸತಿ ಶಾಲೆಗಳು) ಮತ್ತು ಹಾಸ್ಟೆಲ್​ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ಪಡೆದು ತಮ್ಮ ವ್ಯಾಕ್ಸಿನೇಷನ್ ಕಾರ್ಡ್​ಗಳನ್ನು ಕಛೇರಿಗೆ ಸಲ್ಲಿಸಬೇಕು ಎಂದು ಹೇಳಲಾಗಿದೆ. ಲಸಿಕೆ ಪಡೆಯದಿದ್ದಲ್ಲಿ ಮುಂದಿನ ತಿಂಗಳ ಸಂಬಳವನ್ನು ತಡೆಹಿಡಿಯಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

"ಕರೊನಾ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಲು ಇಲಾಖೆಯ ಶೇ.100 ರಷ್ಟು ಸಿಬ್ಬಂದಿ ಲಸಿಕೆ ಪಡೆಯಲಿ ಎಂಬ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದೆ. ಈ ಆದೇಶದ ನಂತರ ಶೇ.95 ರಷ್ಟು ಸಿಬ್ಬಂದಿ ಲಸಿಕೆ ಪಡೆದುಕೊಂಡರು" ಎಂದು ಮಾಸ್ರಾಂ ಹೇಳಿದ್ದಾರೆ. "ಈ ರೀತಿಯ ಆದೇಶ ಹೊರಡಿಸಿದ್ದರೂ, ಸಂಬಳವನ್ನು ನಿಜವಾಗಿ ತಡೆಹಿಡಿಯುವ ಯೋಜನೆ ಇಲಾಖೆಗೆ ಇರಲಿಲ್ಲ. ಎಲ್ಲರೂ ಲಸಿಕೆ ಪಡೆಯಬೇಕೆಂಬುದಷ್ಟೇ ನನ್ನ ಉದ್ದೇಶವಾಗಿತ್ತು" ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net