ಏ.27ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ; ನಿನ್ನೆಯೇ ಮಹತ್ವದ ಆದೇಶ ಹೊರಡಿಸಿದ್ದಾರೆ ಸಿಎಂ ಯೋಗಿ

Yogi Adithyanath 2 Feb 20
Published on

ಲಖನೌ: ಎರಡನೇ ಹಂತದ ಲಾಕ್​ಡೌನ್​ನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಹಾಗೇ ಕೆಲವು ಪ್ರದೇಶಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಗುರುವಾರದಿಂದ ಲಾಕ್​ಡೌನ್​ನಲ್ಲಿ ಸಡಲಿಕೆ ಮಾಡಲಾಗಿದೆ.

ಮೇ 3 ರಬಳಿಕವೂ ಲಾಕ್​ಡೌನ್​ನ್ನು ಸಂಪೂರ್ಣ ಹಿಂಪಡೆಯಲಾಗುವುದು ಅನುಮಾನ. ಈ ಮಧ್ಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಮುಖ ಆದೇಶವೊಂದನ್ನು ಪ್ರಕಟಿಸಿದ್ದಾರೆ. ಜೂನ್​ 30ರವರೆಗೂ ರಾಜ್ಯದಲ್ಲಿ ಸಾರ್ವಜನಿಕವಾಗಿ ಗುಂಪುಗೂಡುವುದನ್ನು ನಿಷೇಧಿಸಿದ್ದಾರೆ.

ಏ.14ರಂದು ಮೊದಲ ಹಂತದ ಲಾಕ್​ಡೌನ್​ ಮುಗಿಯುವುದಕ್ಕೂ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ನಡೆಸಿ, ಚರ್ಚೆ ನಡೆಸಿದ್ದು. ಅದಾದ ಬಳಿಕ ಮೇ 3ರವರೆಗೆ ಲಾಕ್​ಡೌನ್​ ಅವಧಿಯನ್ನು ವಿಸ್ತರಿಸಿದ್ದರು. ಸೋಮವಾರ (ಏಪ್ರಿಲ್​ 27)ರಂದು ಮತ್ತೊಮ್ಮೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಮೂಲಕ ಚರ್ಚೆ ನಡೆಸಲಿದ್ದಾರೆ.

ಈ ಬೆನ್ನಲ್ಲೇ ಶುಕ್ರವಾರ ಸಚಿವ ಸಂಪುಟದ ಸಭೆ ನಡೆಸಿದ್ದ ಯೋಗಿ ಆದಿತ್ಯನಾಥ್​ ಅವರು, ಜೂನ್​ 30ರವರೆಗೆ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನೂ ನಡೆಸುವಂತಿಲ್ಲ. ಗುಂಪುಗೂಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಯೋಗಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಇಂದು ಬೆಳಗ್ಗೆ 25ಕ್ಕೆ ಏರಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net