'ಜೈ ಭೀಮ್' ನಟಿಯ ಹೊಸ ಚಿತ್ರಕ್ಕೆ ಬಂಡವಾಳ ಹೂಡಲು ಹಿಂಜರಿದ ನಿರ್ಮಾಪಕರು! ಅದರ ಹಿಂದಿದೆ ಈ ಕಾರಣ | Actress

ವಿಜಯವಾಣಿ - 2025-02-11T145804.576
Published on

Actress Lijo Mol Jose: ಯಾವುದೇ ಚಿತ್ರೋದ್ಯಮವಾಗಿದ್ದರೂ, ದಿಟ್ಟ ಹಾಗೂ ಬೋಲ್ಡ್ ಕಥಾಹಂದರ ಹೊಂದಿರುವ ಸಿನಿಮಾಗಳು ಖಂಡಿತವಾಗಿಯೂ ಎಲ್ಲರ ಗಮನ ಸೆಳೆಯುತ್ತದೆ ಮತ್ತು ವ್ಯಾಪಕ ಚರ್ಚೆ, ಟೀಕೆಗಳಿಗೆ ಗ್ರಾಸವಾಗುತ್ತವೆ. ಆದಾಗ್ಯೂ, ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಿ ನಡೆಯುವ ಕೆಲವು ನೈಜ ಘಟನೆಗಳನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ನಿಜಕ್ಕೂ ಗಟ್ಟಿ ನಿರ್ಧಾರ ಹಾಗೂ ಧೈರ್ಯ ಬೇಕೇ ಬೇಕು. ಈ ಕುರಿತು ಸ್ವತಃ ಬಹಿರಂಗವಾಗಿಯೂ ಹೇಳಿಕೆ ನೀಡುತ್ತಾರೆ. ತಮ್ಮ ಸಿನಿಮಾ ಯಾವ ವಿಷಯ ಆಧರಿತ, ಕಥಾಹಂದರ ಹೇಗೆ ಸಾಗುತ್ತದೆ ಎಂಬುದರ ಎಳೆಯನ್ನು ತೆರೆಗೆ ತರುವ ಮುನ್ನ ಕೊಂಚ ಬಿಟ್ಟುಕೊಡುತ್ತಾರೆ. ಆದ್ರೆ, ಇಲ್ಲೊಬ್ಬರು ನಿರ್ದೇಶಕರು ಸಮಾಜದಲ್ಲಿ ನಡೆಯುತ್ತಿರುವ ಒಂದು ನೈಜ ಕಥೆಯನ್ನು ತಮ್ಮ ಚಿತ್ರದ ಮೂಲಕ ಜನರಿಗೆ ತೋರಿಸಲು ಮುಂದಾದಾಗ ಅದಕ್ಕೆ ಎದುರಾದ ಪರಿಸ್ಥಿತಿ, ಪಟ್ಟ ಪಾಡು ಒಂದೆರೆಡಲ್ಲ ಎಂಬುದನ್ನು ಇದೀಗ ಮುಕ್ತವಾಗಿ ಹಂಚಿಕೊಂಡಿದ್ದಾರೆ.

'ಜೈ ಭೀಮ್' ಖ್ಯಾತಿಯ ನಟಿ

ತಮ್ಮ ಸಿನಿಮಾಗೂ ಮುನ್ನ ಹಲವಾರು ಚಿತ್ರ ಸಲಿಂಗ ಕಾಮಿಗಳಿಗೆ ಸಂಬಂಧಿಸಿದ ವಿಷಯವನ್ನೇ ಇಟ್ಟುಕೊಂಡು ಬೆಳ್ಳಿಪರದೆಯಲ್ಲಿ ರಿಲೀಸ್ ಆಗಿವೆ ಎಂಬ ನಂಬಿಕೆಯಲ್ಲಿ ನಿರ್ಮಿಸಲಾದ ಕಾಲಿವುಡ್​ನ 'ಕಾದಲ್ ಎನ್ನಬಾಧು ಪುದುವುದಮೈ' ಚಿತ್ರವನ್ನು ಹಲವಾರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿರುವ ನಿರ್ದೇಶಕ ಜಯಪ್ರಕಾಶ್ ರಾಧಾಕೃಷ್ಣನ್, ತಮ್ಮ ಸಿನಿಮಾವನ್ನು ತೆರೆಗೆ ತರುವ ಮುನ್ನ ಎದುರಿಸಿದ ಕಷ್ಟ, ಕಹಿ ಅನುಭವವನ್ನು ಇದೀಗ ಎಲ್ಲರ ಎದುರು ಬಿಚ್ಚಿಟ್ಟಿದ್ದಾರೆ. ಗ್ಲೋಯಿಂಗ್ ಟಂಗ್ಟನ್, ಮ್ಯಾನ್‌ಕೈಂಡ್ ಸಿನಿಮಾಸ್ ಮತ್ತು ನಿಟ್ಸ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ 'ಜೈ ಭೀಮ್' ಖ್ಯಾತಿಯ ನಟಿ ಲಿಜೋಮೋಲ್ ಜೋಸ್ ಲೆಸ್ಬಿಯನ್ ಪಾತ್ರದಲ್ಲಿ ನಟಿಸಿರುವುದು ಗಮನಾರ್ಹ.

ಈ ದಿನ ರಿಲೀಸ್​

ತೆಲುಗಿನ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ನಟಿ ವಿನೀತ್ ರೋಹಿಣಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ತಿಂಗಳ 14ರಂದು ಪ್ರೇಮಿಗಳ ದಿನದಂದು ರಿಲೀಸ್ ಆಗಲು ಸಜ್ಜಾಗಿದೆ. ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆಷ್ಟೇ ಅದ್ಧೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ, ಚಿತ್ರದ ನಿರ್ದೇಶಕ ಜಯಪ್ರಕಾಶ್ ಮಾತನಾಡಿ, "ಮಸ್ಕಿಟೋ ಫಿಲಾಸಫಿ" ಎಂಬ ಚಿತ್ರವನ್ನು ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದೆ. ಅದರ ಎಡಿಟಿಂಗ್​ಗಾಗಿ ನಾನು ಬೆಂಗಳೂರಿಗೆ ಹೋದಾಗ, ಅಲ್ಲಿನ ಸ್ನೇಹಿತನೊಂದಿಗೆ ಈ ಸಿನಿಮಾದ ಎಳೆಯನ್ನು ಚರ್ಚಿಸಿದೆ ಎಂದರು.

ನಿರ್ಮಿಸಲು ಹಿಂಜರಿಕೆ

"ನಾನು ಕಥೆಯನ್ನು ಸಿದ್ಧಪಡಿಸಿದ ಬಳಿಕ ಬಂಡವಾಳ ಹೂಡಲು ನಿರ್ಮಾಪಕರ ಹುಡುಕಾಟದಲ್ಲಿದ್ದೆ. ಈ ಮಧ್ಯೆ ಅನೇಕರನ್ನು ಭೇಟಿಯಾದೆ. ಆದರೆ, ಯಾರೊಬ್ಬರು ಈ ಕಥೆಯೊಂದಿಗೆ ಚಿತ್ರ ಮಾಡಲು ಮುಂದೆ ಬರಲಿಲ್ಲ. ಕಥೆಯನ್ನು ಕೇಳಿದ ಕೂಡಲೇ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು. ಕಾರಣ, ಚಿತ್ರ ಸಲಿಂಗಕಾಮಿ ವಿಷಯವನ್ನು ಹೊಂದಿದೆ ಎಂದು. ಅದೇ ರೀತಿ, ಇನ್ನೂ ಕೆಲವರು ಇದನ್ನು ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಿಸಬೇಕು, ಆದರೆ ತಮಿಳಿನಲ್ಲಿ ಮಾಡಬಾರದು ಎಂದು ಒತ್ತಾಯಿಸಿದರು. ಇಂತಹ ಕಠಿಣ ಸಮಯದಲ್ಲಿ, ನಿರ್ಮಾಪಕ ಜಿಯೋಬೇಬಿ ಈ ಚಿತ್ರವನ್ನು ನಿರ್ಮಿಸಲು ಮುಂದೆ ಬಂದರು" ಎಂದು ಹೇಳಿದರು.

"ಕಾದಲ್ ಸಿನಿಮಾ ಇಬ್ಬರು ಯುವತಿಯರ ನಡುವಿನ ಪ್ರೀತಿಯನ್ನು ಅನ್ವೇಷಿಸುವ ಕಥೆಯನ್ನು ಒಳಗೊಂಡಿದೆ. ಚಿತ್ರವನ್ನು ಪೂರ್ಣಗೊಳಿಸಿದ ಬಳಿಕ ಅದರ ರಿಲೀಸ್​ಗಾಗಿ ನಾನು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ. ಇನ್ನೂ ಧನಂಜಯನ್ ಕೂಡ ನಮ್ಮ ಪಾಲಿಗೆ ದೇವರಂತೆ ಬಂದರು. ಈ ಚಿತ್ರವನ್ನು ತಮಿಳುನಾಡಿನಲ್ಲಿ ಬಿಡುಗಡೆಗೊಳಿಸುವ ಜವಾಬ್ದಾರಿಯನ್ನು ಧನಂಜಯನ್ ತೆಗೆದುಕೊಂಡಿದ್ದಾರೆ. ಒಟಿಟಿ ಪ್ರವೇಶಿಸುವ ಸಮಯದಲ್ಲಿ ನಮ್ಮ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗಲಿದೆ" ಎಂದು ನಿರ್ದೇಶಕರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net