ವಿಜಯವಾಣಿ ಜತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಎಷ್ಟೋ ಜನರು ಪ್ರತಿನಿತ್ಯ ಬೆಳಗ್ಗೆ ಕಾಫಿ, ಚಹಾ ಸಿಗದಿದ್ದರೂ ಚಿಂತಿಸುವುದಿಲ್ಲ. ಆದರೆ, ದಿನ ಪತ್ರಿಕೆ ಮಾತ್ರ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಇದರ ಸೇವೆಗಳಿಗೆ ಅಡ್ಡಿಪಡಿಸುವುದಿಲ್ಲ. ಈ ಹಿಂದಿನಂತೆ ದಿನ ಪತ್ರಿಕೆಗಳು ಹಂಚಿಕೆಯಾಗಲಿದೆ. ಬೆಳಗ್ಗೆ 10 ಗಂಟೆವರೆಗೆ ಅಂಗಡಿಗಳಲ್ಲಿ ಖರೀದಿ ಮಾಡಬಹುದು. ನಗರದಲ್ಲಿ ದಿನಪತ್ರಿಕೆ ಸಾಗಾಟ ವಾಹನ, ಹಂಚಿಕೆ, ಮಾರಾಟಕ್ಕೆ ಎಂದಿನಂತೆ ಅವಕಾಶ ಕಲ್ಪಿಸಲಾಗಿದೆ. ದಿನ ಪತ್ರಿಕೆ ಖರೀದಿಸಬಹುದೇ? ಅಥವಾ ಎಂದಿನಂತೆ ಮನೆ ಬಾಗಿಲಿಗೆ ಬರುತ್ತದೆಯೇ? ಎಂಬ ಬಗ್ಗೆ ಗೊಂದಲ ಬೇಡ. ಈವರೆಗೆ ಹೇಗಿತ್ತೋ ಹಾಗೆಯೇ ಮುಂದು ವರಿಯಲಿದೆ. ಪ್ರಪಂಚ, ದೇಶ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಜನರಿಗೆ ತಲುಪಿಸುವಲ್ಲಿ ದಿನ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಅಗತ್ಯ ಸೇವೆಗಳಂತೆ ಪತ್ರಿಕೆ ಸರಬರಾಜಿಗೂ ವಿನಾಯಿತಿ ಇದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.