

ಯಾವುದೇ ಗಂಭೀರ ವಿಷಯ, ಯೋಜನೆಗಳೇ ಇರಲಿ ಎಲ್ಲದರಲ್ಲೂ ರಾಜಕೀಯವನ್ನು ಎಳೆದು ತರುವ ಕೆಟ್ಟ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಬೆಳವಣಿಗೆ. ‘ಜನರ ಸೇವೆ ಮಾಡಲು ನಮ್ಮನ್ನು ಗೆಲ್ಲಿಸಿ’ ಎಂದು ಚುನಾವಣೆಯ ಮುಂಚೆ ವಿನಯಪೂರ್ವಕವಾಗಿ ಹೇಳಿಕೊಂಡು ಓಡಾಡುವ ರಾಜಕಾರಣಿಗಳು, ಗೆಲುವಿನ ಬಳಿಕ ವರಸೆಯನ್ನೇ ಬದಲಿಸುತ್ತಾರೆ. ಜನಹಿತಕ್ಕೆ ವಿರುದ್ಧವಾದ ಕ್ರಮಗಳನ್ನು ಕೈಗೊಂಡು ಅದನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುತ್ತಾರೆ. ದೆಹಲಿ ವಿಧಾನಸಭೆ ಚುನಾವಣೆ ಬಳಿಕ, ಅಲ್ಲೀಗ ಆಡಳಿತ ಪಕ್ಷ ಬದಲಾಗಿದೆ. ಆದರೆ, ಮೊದಲು ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷವು ಆರೋಗ್ಯವಿಮೆ ಯೋಜನೆಯಾದ ‘ಆಯುಷ್ಮಾನ್ ಭಾರತ್’ನ್ನು ಜಾರಿಗೊಳಿಸಿರಲಿಲ್ಲ. ಕಾರಣ, ಅದು ಕೇಂದ್ರ ಸರ್ಕಾರದ ಯೋಜನೆ ಎಂದು. ಇದು ಜನರಿಗೆ ಎಸಗಿದ ಮೋಸವಲ್ಲದೆ ಮತ್ತೇನು?
ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಷ್ಠಾನದ ವಿಷಯದಲ್ಲೂ ರಾಜಕೀಯ ಮೇಲಾಟ ಜೋರಾಗಿದೆ. ಹೀಗಾಗಿ, ಈ ನೀತಿಯನ್ನು ಜಾರಿಗೊಳಿಸುವುದು ಗೊಂದಲದ ಗೂಡಾಗಿ ಪರಿಣಮಿಸಿದೆ. ರಾಷ್ಟ್ರದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಎತ್ತಿಹಿಡಿಯುವ ಮತ್ತು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಶಿಕ್ಷಣ ನೀತಿ ಅವಶ್ಯ. ಆದರೆ, ಎನ್ಇಪಿ ಜಾರಿಯ ವಿಷಯದಲ್ಲಿ ರಾಜಕೀಯದ ಕರಿನೆರಳು ಆವರಿಸಿಕೊಂಡಿದ್ದು, ಈ ಕಿತ್ತಾಟದಲ್ಲಿ ವಿದ್ಯಾರ್ಥಿಗಳ ಹಿತ ಮತ್ತು ಶೈಕ್ಷಣಿಕ ಉದ್ದೇಶ ಬಲಿಯಾಗಬಾರದು ಎಂಬುದು ಮುಖ್ಯ. ಈ ವಿವಾದಗಳ ಹಿನ್ನೆಲೆಯಲ್ಲೇ ‘ಎನ್ಇಪಿ ಜಾರಿಗೆ ರಾಜಕೀಯ ಲೇಪ ಬೇಡ’ ಎಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಹೇಳಿರುವುದು ಸೂಕ್ತವಾಗಿದೆ.
‘ಎನ್ಇಪಿಯ ತ್ರಿಭಾಷಾ ಸೂತ್ರ ಜಾರಿಗೊಳಿಸುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಟಾಲಿನ್ ಅವರಿಗೆ ಪತ್ರ ಬರೆದಿರುವ ಧಮೇಂದ್ರ ಪ್ರಧಾನ್, ‘ಮುಖ್ಯಮಂತ್ರಿಯಾಗಿರುವ ನೀವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ನಿಲ್ಲಬೇಕು ಮತ್ತು ಎನ್ಇಪಿಯಿಂದ ಪ್ರಯೋಜನ ಪಡೆದುಕೊಳ್ಳಲಿರುವ ಯುವಜನತೆಯ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡಬೇಕು. ತ್ರಿಭಾಷಾ ಸೂತ್ರವು ಯಾವುದೇ ಭಾಷೆಯ ಹೇರಿಕೆಯನ್ನು ಪ್ರತಿಪಾದಿಸುವುದಿಲ್ಲ’ ಎಂದಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸ್ಟಾಲಿನ್, ‘ಕೇಂದ್ರ ಪ್ರಾಯೋಜಿತ ಉಪಕ್ರಮಗಳಾದ ಸಮಗ್ರ ಶಿಕ್ಷಣ ಅಭಿಯಾನ ಮತ್ತು ಪಿ.ಎಂ. ಶ್ರೀ ಶಾಲೆಗಳನ್ನು ಎನ್ಇಪಿಯೊಂದಿಗೆ ಜೋಡಿಸುವುದು ಸ್ವೀಕಾರಾರ್ಹವಲ್ಲ’ ಎಂದಿದ್ದರು.
ನುರಿತ ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಹಲವು ಬಾರಿ ಸಮಾಲೋಚನೆ ನಡೆಸಿ, ಹಲವು ತಿಂಗಳುಗಳ ಕಾಲ ಸಿದ್ಧತೆ ನಡೆಸಿ ಎನ್ಇಪಿಯನ್ನು ರೂಪಿಸಲಾಗಿದೆ. ಹಾಗಾಗಿ, ಎನ್ಇಪಿಯನ್ನು ಸಮಗ್ರವಾಗಿ ಅವಲೋಕಿಸಿ, ಶೈಕ್ಷಣಿಕ ಮಟ್ಟ ಸುಧಾರಣೆ, ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತ ಕಾಪಾಡಬೇಕು. ಅದನ್ನು ಬಿಟ್ಟು ರಾಜಕೀಯ ಭಿನ್ನಾಭಿಪ್ರಾಯಗಳು ಶೈಕ್ಷಣಿಕ ವಲಯದ ಸುಧಾರಣೆಗೆ ಧಕ್ಕೆ ತರುವಂತಾಗಬಾರದು.