

Durgesh Kumar: ನಿರಂತರ ಶ್ರಮಿಸಿ, ಫಲ ನಿರೀಕ್ಷಿಸಬೇಡಿ ಎಂದು ಹೇಳುತ್ತಾರೆ. ಆದರೆ, ಜೀವನದಲ್ಲಿ ಹಲವು ವರ್ಷಗಳಿಂದ ಬೆವರು ಸುರಿಸಿ ದುಡಿಯುತ್ತಿದ್ದರೂ ಸಹ ಫಲವಿಲ್ಲ ಎಂದರೆ ಹೇಗೆ? ಎಂದು ಪಂಚಾಯತ್ ವೆಬ್ ಸರಣಿ ಖ್ಯಾತಿಯ ನಟ ದುರ್ಘೇಶ್ ಕುಮಾರ್ ಭಾವುಕರಾಗಿ ಮಾತನಾಡಿದ್ದಾರೆ.
ಪಂಚಾಯತ್ ಸರಣಿ ಮತ್ತು ಲಪಾಟ ಲೇಡಿಸ್ನಲ್ಲಿ ಅಭಿನಯಿಸಿ, ಸಿನಿಪ್ರಿಯರ ಗಮನ ಸೆಳೆದಿರುವ ಕುಮಾರ್, ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ತಮ್ಮ ವೃತ್ತಿ ಜೀವನದ ಕಹಿ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬದುಕಿನಲ್ಲಿ ಕಷ್ಟ ಅನ್ನೋದು ನನ್ನ ಮನೆ ಆಗಿಬಿಟ್ಟಿದೆ. ಸ್ನೇಹಿತರು ಅಥವಾ ಇತರರು ನನಗೆ ಕಷ್ಟವಾಗಿ ಕಾಡಿಲ್ಲ. ಯಾವ ಆಡಿಷನ್‌ಗಳಿಗೂ ನನ್ನನ್ನು ಕರೆಯೋದಿಲ್ಲ. ಅವಕಾಶಗಳಿಗೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನನ್ನನ್ನು ಆಡಿಷನ್‌ಗಳಿಗೂ ಕರೆಯುತ್ತಿಲ್ಲ. ಕಷ್ಟಗಳು ನನ್ನ ಮನೆಯಾಗಿವೆ, ನನ್ನ ಸ್ನೇಹಿತರಲ್ಲ. ಪಂಚಾಯತ್ ವೆಬ್ ಸರಣಿಯೊಂದಿಗೆ ನಾನು ಯಶಸ್ವಿಯಾಗಿದ್ದೇನೆ ಎಂದು ಎಲ್ಲರೂ ನೋಡುತ್ತಿದ್ದಾರೆ. ಆದರೆ ನಾನು ಇನ್ನೂ ಕಷ್ಟಗಳನ್ನು ಎದುರಿಸುತ್ತಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ನನಗೆ ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ಒಂದೇ ಒಂದು ಫೋನ್ ಕರೆ ಬಂದಿಲ್ಲ. ಆಡಿಷನ್‌ಗಳಿಗೆ ಬರಲು ಯಾರೂ ನನ್ನನ್ನು ಕರೆಯಲಿಲ್ಲ. ನನ್ನ ಪ್ರತಿಭೆಯನ್ನು ಗುರುತಿಸಿದ ಸಣ್ಣ ನಿರ್ಮಾಪಕರೊಂದಿಗೆ ನಾನು ಹೆಚ್ಚಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಇನ್ನೂ ಆಡಿಷನ್‌ಗಳಿಗೆ ಓಡುತ್ತಿದ್ದೇನೆ.
ಜನಪ್ರಿಯತೆ, ಹೆಸರು ಸಂಪಾದಿಸಿದ್ದರೂ ಚಿತ್ರರಂಗದಲ್ಲಿ ನನಗೆ ದೊಡ್ಡ ಪಾತ್ರಗಳನ್ನು ಕೊಡುತ್ತಿಲ್ಲ. ಎಲ್ಲರಿಗೂ ನಾನು ಚಿರಪರಿಚಿತನೇ. ಆದರೆ ಅವಕಾಶಗಳು ಮಾತ್ರ ನನ್ನಿಂದ ದೂರ ಉಳಿಯುತ್ತಿವೆ. ನನ್ನ ಪರಿಸ್ಥಿತಿ ಹೇಗಿರುತ್ತದೆ ಎಂಬುದು ನನಗೇ ತಿಳಿದಿಲ್ಲ. ಇನ್ನೊಂದು ವಿಷಯ ಏನೆಂದರೆ, ನಾನು ನಟಿಸಿದ ಚಿತ್ರಗಳು ಪ್ರಶಸ್ತಿಗಳನ್ನು ಗೆಲ್ಲುತ್ತಿವೆ. ಅನೇಕ ಚಲನಚಿತ್ರ ವಿಮರ್ಶಕರು ಆಯಾ ಚಿತ್ರಗಳನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ನನ್ನ ಹೆಸರನ್ನು ಅವುಗಳಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಎಂದು ಬೇಸರ ಹೊರಹಾಕಿದರು.
ನನಗೆ ಸಿಗಬೇಕಾದ ಕ್ರೆಡಿಟ್ ಎಂದಿಗೂ ಸಿಗುವುದಿಲ್ಲ. ಕನಿಷ್ಠ ಪ್ರೇಕ್ಷಕರಾದರೂ ನನ್ನ ಕೆಲಸವನ್ನು ಗುರುತಿಸಿದ್ದಾರೆ ಎಂಬ ಹೆಮ್ಮೆಯಿದೆ ಎಂದು ದುರ್ಗೇಶ್ ತಮ್ಮ ಮನದಾಳದ ಮಾತನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 'ಹೈವೇ', 'ಸುಲ್ತಾನ್', 'ಸಂಜು', 'ಧಡಕ್' ಮತ್ತು 'ಭಕ್ಷಕ್' ಚಿತ್ರಗಳಲ್ಲಿ ದುರ್ಗೇಶ್ ಕುಮಾರ್ ನಟಿಸಿದ್ದಾರೆ,(ಏಜೆನ್ಸೀಸ್).