

ದಾವಣಗೆರೆ: ತಮ್ಮದೇ ಪಕ್ಷದ ನಾಯಕರ ವಿರುದ್ಧ ಮತ್ತೊಮ್ಮೆ ಗುಡುಗಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಲ್ಲದೆ, ಬಿಜೆಪಿ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ಕೊಡುವುದಿಲ್ಲ ಎಂಬುದಾಗಿಯೂ ಹೇಳಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು ಈ ಸ್ಪಷ್ಟನೆಯನ್ನು ನೀಡಿದ್ದಾರೆ. ನಾನೇನು ಬಿಜೆಪಿ ಪಕ್ಷ ಇಲ್ಲವೇ ಮೋದಿಯವರ ವಿರುದ್ಧ ಮಾತನಾಡಿದ್ದೇನಾ? ನೋಟಿಸ್ಗೆ ನಾನೇಕೆ ಉತ್ತರ ಕೊಡಬೇಕು? ಬಿಜೆಪಿ ಕಚೇರಿಯಲ್ಲಿ 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳುತ್ತಾರೆ. ಹೊರಗೆ ಬಂದು ನನ್ನೊಬ್ಬನಿಗೆ ನೋಟಿಸ್ ಎಂದು ಹೇಳುತ್ತಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದೇ ನನಗೆ ಗೊತ್ತಿಲ್ಲ. ಶಿಸ್ತು ಸಮಿತಿ ನನ್ನೊಬ್ಬನಿಗೆ ನೋಟಿಸ್ ನೀಡಿ ಬೇರೆಯವರಿಗೆ ಏಕೆ ನೀಡಿಲ್ಲ? ನಾನು ಕಾಂಗ್ರೆಸ್ಗೆ ಹೋಗಲ್ಲ. ಕಾಂಗ್ರೆಸ್ ಮುಖಂಡರ ಜೊತೆ ರಾಜಕೀಯ ಹೊರತಾದ ಉತ್ತಮ ಸ್ನೇಹ ಸಂಬಂಧ ಇದೆ. ಶಾಮನೂರು ಶಿವಶಂಕರಪ್ಪ ಅವರ ಜೊತೆಯಲ್ಲಿ ಮೈಸೂರಿಗೆ ಫ್ಲೈಟ್ನಲ್ಲಿ ಒಂದು ಬಾರಿ ಹೋಗಿದ್ದೆ. ಶಾಮನೂರು ಪ್ರೀತಿಯಿಂದ ನನಗೆ ನನ್ನ ಫ್ಲೈಟ್ನಲ್ಲಿ ಬರುವಂತೆ ಆಹ್ವಾನ ನೀಡಿದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ನಾನು ಪೋನ್ ಮಾಡಿ ಸಮಯ ತೆಗೆದುಕೊಂಡು ಹೋಗಿ ಮಾತನಾಡಿದ್ದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ, ನಾನು ಕಾಂಗ್ರೆಸ್ ಹೋಗಲ್ಲ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಸದೃಢವಾಗಿ ಕಟ್ಟಲು ಸಮರ್ಥನಿದ್ದೇನೆ ಎಂದಿರುವ ರೇಣುಕಾಚಾರ್ಯ, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.