

ನವದೆಹಲಿ: ಭಾರತದಲ್ಲಿ ಕರೊನಾ ಸಾಂಕ್ರಾಮಿಕತೆ ವಿರುದ್ಧ ಹೋರಾಡುವಲ್ಲಿ ಲಸಿಕೆಗಳು ಪರಿಣಾಮಕಾರಿ ಪಾತ್ರ ವಹಿಸಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡಂಥ ಅಲೆ ತಡೆಯುವಲ್ಲಿ ಭಾರತೀಯ ವ್ಯಾಕ್ಸಿನ್ಗಳು ಯಶಸ್ವಿಯಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ವೈರಾಣು ವಿಭಾಗದ ಮುಖ್ಯಸ್ಥೆ ನಿವೇದಿತಾ ಗುಪ್ತಾ ಹೇಳಿದ್ದಾರೆ.
ಹಾಂಕಾಂಗ್ ಮತ್ತು ಕೆನಡಾದಂಥ ದೇಶಗಳು ಐದನೇ ಹಾಗೂ ಆರನೇ ಅಲೆಯನ್ನು ಎದುರಿಸುತ್ತಿವೆ. ಆದರೆ ಭಾರತಕ್ಕೆ ಹೊಸ ಅಲೆಯ ಭೀತಿ ಅನಗತ್ಯ ಎಂದು ಗುಪ್ತಾ ಸ್ಪಷ್ಟಪಡಿಸಿದ್ದಾರೆ. ಎರಡನೇ ಅಥವಾ ‘ಡೆಲ್ಟಾ’ ಅಲೆಯ ವೇಳೆ ಬಿಟ್ಟರೆ ಇನ್ನುಳಿದಂತೆ ಭಾರತ ಸಾಂಕ್ರಾಮಿಕತೆಯನ್ನು ಉತ್ತಮವಾಗಿಯೇ ನಿಭಾಯಿಸಿದೆ. ಬೇರೆ ದೇಶಗಳು ಲಾಕ್ಡೌನ್ ಮತ್ತು ಇತರ ಸೀಮಿತ ನಿರ್ಬಂಧ ನೀತಿಗಳನ್ನು ಅನುಸರಿಸಿದ್ದರಿಂದ ಅಲ್ಲೆಲ್ಲ ಹಲವು ಅಲೆಗಳು ಎದುರಾದವು. ‘ಶೂನ್ಯ-ಕೋವಿಡ್’ ನೀತಿ ಅನುಸರಿಸಿದ ದೇಶಗಳು ಲಾಕ್ಡೌನ್ಗಳನ್ನು ಸಡಿಲಗೊಳಿಸುತ್ತಿದ್ದಂತೆ ಸೋಂಕಿನ ಅಬ್ಬರ ಕಂಡು ಬಂದಿದೆ ಎಂದು ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಕೊವೊವ್ಯಾಕ್ಸ್ಗೆ ಶಿಫಾರಸು: 12ರಿಂದ 17 ವಯೋ ಗುಂಪಿನ ಮಕ್ಕಳಿಗೆ ಸೆರಂ ಸಂಸ್ಥೆಯ ಕೊವೊವ್ಯಾಕ್ಸ್ ಲಸಿಕೆ ನೀಡಲು ಅನುಕೂಲವಾಗುವಂತೆ ಅದನ್ನು ಲಸಿಕೆ ಅಭಿಯಾನದಲ್ಲಿ ಸೇರಿಸಲು ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್ಟಿಎಜಿಐ) ಸ್ಥಾಯಿ ತಾಂತ್ರಿಕ ಉಪ-ಸಮಿತಿ ಶಿಫಾರಸು ಮಾಡಿದೆ.
ಸಕ್ರಿಯ ಕೇಸ್ ಏರಿಕೆ: ಭಾರತದಲ್ಲಿ ಶುಕ್ರವಾರ ಕರೊನಾ ಸೋಂಕಿನ 3,377 ಹೊಸ ಪ್ರಕರಣಗಳು ದೃಢಪಟ್ಟಿವೆ. 60 ರೋಗಿಗಳು ಮರಣಿಸಿದ್ದಾರೆ. ದೇಶದ ಸಕ್ರಿಯ ಕೇಸ್ಗಳ ಸಂಖ್ಯೆ 17,801ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಚೀನಾದಲ್ಲಿ ಕಠಿಣ ನಿಯಮ ಮುಂದುವರಿಕೆ: ಕೋವಿಡ್ ಸೋಂಕಿನ ಪ್ರಕರಣಗಳ ಹೆಚ್ಚಳ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮೂಹಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿರುವ ಚೀನಾ ರಾಜಧಾನಿ ಬೀಜಿಂಗ್ಗೆ ಜನರ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಹೊರ ಹೋಗುವುದನ್ನು ನಿರ್ಬಂಧಿಸಲಾಗಿದೆ. ರಾಜಧಾನಿಯಲ್ಲಿ ಶುಕ್ರವಾರ ಅನೇಕ ವಾಣಿಜ್ಯ ಸಂಕೀರ್ಣಗಳು ಮತ್ತು ವಸತಿ ಸಮುಚ್ಚಯಗಳನ್ನು ಮುಚ್ಚಲಾಗಿದ್ದು ಬೀಜಿಂಗ್ನಲ್ಲಿ ಲಾಕ್ಡೌನ್ ಹೇರುವ ಸಾಧ್ಯತೆ ಕಂಡು ಬಂದಿದೆ. ಆದರೆ ಅಧಿಕಾರಿಗಳು ಇನ್ನೂ ಈ ಬಗ್ಗೆ ಏನನ್ನೂ ಹೇಳಿಲ್ಲ. ಅತ್ತ, ಆರ್ಥಿಕ ಕೇಂದ್ರ ಶಾಂಘೈಯಲ್ಲಿ ನಿರ್ಬಂಧಗಳ ವಿರುದ್ಧ ಜನರ ಅಸಹನೆ ಹೆಚ್ಚಾಗುತ್ತಿದೆ.
ಕೊರ್ಬೆವ್ಯಾಕ್ಸ್ ಮಾನ್ಯತೆಗೆ ಕ್ರಮ: ಬಯಾಲಾಜಿಕಲ್ ಇ ಕಂಪನಿಯ ಕೊರ್ಬೆವ್ಯಾಕ್ಸ್ ಲಸಿಕೆಗೆ ವಿದೇಶಗಳ ಮಾನ್ಯತೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಭಾರತ ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ನಡುವೆ, ಭಾರತದಲ್ಲಿ 12-14 ವಯೋಮಿತಿಯ ಮಕ್ಕಳಿಗೆ ನೀಡಲಾಗುತ್ತಿರುವ ಈ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಅನುಮೋದನೆ ಪಡೆಯಲು ಬಯಾಲಾಜಿಕಲ್ ಇ ಪ್ರಯತ್ನಿಸುತ್ತಿದೆ. ಹಾಂಕಾಂಗ್ನಂಥ ಕೆಲವು ದೇಶಗಳು ಮಕ್ಕಳಿಗೆ ಲಸಿಕೆ ಹಾಕಿರುವ ಬಗ್ಗೆ ಸರ್ಟಿಫಿಕೆಟ್ ಕೇಳುತ್ತಿವೆ ಎಂದು ಕೋವಿಡ್ ಲಸಿಕೆ ಕುರಿತ ಉನ್ನತಾಧಿಕಾರದ ಗುಂಪಿನ ಸದಸ್ಯರಿಗೆ ನೀಡಲಾದ ಸುತ್ತೋಲೆ ತಿಳಿಸಿದೆ. ಹೀಗಾಗಿ ಅದಕ್ಕೆ ಮಾನ್ಯತೆ ಒದಗಿಸಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಲಿದೆ.
ಡಯಾಬಿಟಿಸ್ಗೆ ಸಂಬಂಧವಿಲ್ಲ: ಕರೊನಾ ಸಾಂಕ್ರಾಮಿಕತೆಗೂ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಮಧುಮೇಹ (ಡಯಾಬಿಟಿಸ್) ಏರಿಕೆಗೂ ಸ್ಪಷ್ಟ ಹಾಗೂ ನೇರ ಸಂಬಂಧವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕೋವಿಡೋತ್ತರ ಬಳಲಿಕೆ ಹಾಗೂ ಜೀವನಶೈಲಿಯಲ್ಲಿನ ಬದಲಾವಣೆಗಳು ಅದಕ್ಕೆ ಕಾರಣವಾಗಬಹುದು ಎಂದು ಫೋರ್ಟಿಸ್-ಸಿಡಿಒಸಿಯ ಅಧ್ಯಕ್ಷ ಅನೂಪ್ ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ.