

Watermelon : ನಮ್ಮಲ್ಲಿ ಯಾವುದೇ ಸಂದೇಹಗಳಿದ್ದರೂ ಈ ಹಿಂದೆ ನಾವು ಎಲ್ಲದಕ್ಕೂ ಗೂಗಲ್ ಮಾಡಿ ಉತ್ತರ ಹುಡುಕುತ್ತಿದ್ದೆವು. ಆದರೆ, ಇತ್ತೀಚೆಗೆ ನಾವು ಚಾಟ್‌ಜಿಪಿಟಿಯಂತಹ ಎಐ (ಕೃತಕ ಬುದ್ಧಿಮತ್ತೆ) ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ವೈದ್ಯಕೀಯ ಮಾಹಿತಿಯಿಂದ ಹಿಡಿದು ಅಡುಗೆಮನೆಯ ಅಗತ್ಯಗಳವರೆಗೆ, ಚಾಟ್‌ಜಿಪಿಟಿಯನ್ನು ಬಳಸಲು ಪ್ರಾರಂಭಿಸಿದ್ದೇವೆ. ಇದೀಗ ಅದೇ ಚಾಟ್‌ಜಿಪಿಟಿಯನ್ನು ಬಳಸಿ ಯುವತಿಯೊಬ್ಬಳು ಕಲ್ಲಂಗಡಿ ಹಣ್ಣು ಖರೀದಿಸುವ ವಿಡಿಯೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
ಅಂದಹಾಗೆ ನಮ್ಮಲ್ಲಿ ಕಲ್ಲಂಗಡಿ ಇಷ್ಟಪಡದವರು ಬಹಳ ಕಡಿಮೆ ಅಂತಾನೇ ಹೇಳಬಹುದು. ಕಲ್ಲಂಗಡಿ ತುಂಬಾ ರುಚಿಯಾಗಿರುವುದಲ್ಲದೆ, ದಾಹವನ್ನು ಸಹ ನೀಗಿಸುತ್ತದೆ. ಅಲ್ಲದೆ, ಇದು ಸದಾ ದೊರೆಯುವ ಹಣ್ಣು. ನಾವು ಕಲ್ಲಂಗಡಿಯನ್ನು ಖರೀದಿ ಮಾಡುವಾಗ ತುಂಬಾ ಗೊಂದಲಕ್ಕೆ ಒಳಗಾಗುತ್ತೇವೆ. ಯಾವ ಹಣ್ಣು ಚೆನ್ನಾಗಿದೆ? ಯಾವುದು ಸಿಹಿಯಾಗಿದೆ? ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಕೆಲವೊಮ್ಮೆ ಮನೆಗೆ ತಂದಂತಹ ಹಣ್ಣು ಒಳಗೆ ಹಾಳಾಗಿರುವ ಉದಾಹರಣೆಗಳೂ ಇವೆ. ಹಾಗಾದರೆ, ಒಂದೊಳ್ಳೆ ಹಣ್ಣನ್ನು ಖರೀದಿ ಮಾಡುವುದು ಹೇಗೆ?
ಈ ಪ್ರಶ್ನೆಗೆ ಉತ್ತರ ನೀಡುವಂತಹ ವಿಡಿಯೋವೊಂದನ್ನು ಯುವತಿ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಲು ChatGPT ಒಂದು ಉತ್ತಮ ಪರಿಹಾರ ಎಂದಿದ್ದಾಳೆ.
ಯುವತಿ ಒಂದು ಕಲ್ಲಂಗಡಿ ಹಣ್ಣಿನ ಮಳಿಗೆಗೆ ಹೋಗುತ್ತಾಳೆ. ಅಲ್ಲಿ ಸಾಕಷ್ಟು ಹಣ್ಣುಗಳಿರುತ್ತವೆ. ಆದ್ದರಿಂದ ಯಾವುದನ್ನು ಖರೀದಿಸಬೇಕೆಂದು ಗೊಂದಲ ಆಕೆಯಲ್ಲಿ ಮೂಡುತ್ತದೆ. ಚೆನ್ನಾಗಿರುವ ಹಣ್ಣನ್ನು ಖರೀದಿ ಮಾಡುವುದು ಹೇಗೆ ಎಂಬ ಪ್ರಶ್ನೆ ಆಕೆಯಲ್ಲಿ ಮೂಡುತ್ತದೆ. ಈ ವೇಳೆ ಆಕೆಗೆ ಒಂದು ಉಪಾಯ ಬರುತ್ತದೆ. ಅದೇನೆಂದರೆ, ಯುವತಿ ತನ್ನ ಫೋನ್ ತೆಗೆದು ಕಲ್ಲಂಗಡಿ ಹಣ್ಣುಗಳ ಫೋಟೋ ತೆಗೆಯುತ್ತಾಳೆ. ಬಳಿಕ ಆ ಫೋಟೋವನ್ನು ChatGPT ನಲ್ಲಿ ಹಾಕುತ್ತಾಳೆ. ಬಳಿಕ ಯಾವುದು ಉತ್ತಮ ಕಲ್ಲಂಗಡಿ ಹಣ್ಣು? ಎಂದು ಪ್ರಶ್ನೆ ಮಾಡುತ್ತಾಳೆ. ಬಳಿಕ ChatGPT ತಕ್ಷಣವೇ ಆ ಗುಂಪಿನಲ್ಲಿ ಒಂದು ಹಣ್ಣನ್ನು ಗುರುತಿಸಿ ಅದು ಅತ್ಯುತ್ತಮ ಎಂದು ಹೇಳುತ್ತದೆ. ಬಳಿಕ ಅದನ್ನು ಖರೀದಿ ಮಾಡಿ, ಮನೆಗೆ ಬಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದಾಗ, ಅದು ಒಳ್ಳೆಯ ಕೆಂಪು ಬಣ್ಣದಲ್ಲಿ, ಸಿಹಿಯಾಗಿತ್ತು. ಈ ವಿಚಾರವನ್ನು ಯುವತಿ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.
ಸದ್ಯ ವಿಡಿಯೋ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ನೂರಾರು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. ಈ ರೀತಿಯೂ ಖರೀದಿ ಮಾಡಬಹುದು? ನಿಜಕ್ಕೂ ಇದು ತುಂಬಾ ಚೆನ್ನಾಗಿದೆ. ಇದೊಂದು ಒಳ್ಳೆಯ ಐಡಿಯಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಮುಂದೆ ನಾವು ಕೂಡ ಇದೇ ವಿಧಾನವನ್ನು ಫಾಲೋ ಮಾಡುತ್ತೇವೆ ಎಂದು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. ಅಂದಹಾಗೆ, ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)