ಈ ಒಂದು ತೀರ್ಪು... ನಟ ದರ್ಶನ್​ ಜಾಮೀನು ರದ್ದಾದ ಬೆನ್ನಲ್ಲೇ ನಟಿ ರಮ್ಯಾ ಇನ್​ಸ್ಟಾ ಸ್ಟೋರಿ ವೈರಲ್! Darshan Bail Cancel ​

Darshan Bail Cancel
Published on

Darshan Bail Cancel : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್​ ಸೇರಿದಂತೆ 7 ಆರೋಪಿಗಳಿಗೆ ಹೈಕೋರ್ಟ್​ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್​ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಅವರು ಇನ್​ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದು, ಅದರಲ್ಲಿ ಕಾನೂನಿನ ಮುಂದೆ ಎಲ್ಲರು ಸಮಾನರು ಎಂಬ ಬಲವಾದ ಸಂದೇಶವನ್ನು ಸುಪ್ರೀಂ ಕೋರ್ಟ್​ ರವಾನಿಸಿದೆ ಎಂದು ಬರೆದುಕೊಂಡಿದ್ದಾರೆ.

ಸುಪ್ರೀಂ ಕೋರ್ಟ್​ ಹೇಳಿದ್ದೇನು?

ದರ್ಶನ್​ ಸೇರಿದಂತೆ ಎಲ್ಲ 7 ಆರೋಪಿಳಿಗೆ ಹೈಕೋರ್ಟ್​ ನೀಡಿದ್ದ ಜಾಮೀನು ಆದೇಶವನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ ರದ್ದು ಮಾಡಿತು. ಹೈಕೋರ್ಟ್​ ನೀಡಿದ ಜಾಮೀನಿನಲ್ಲಿ ದೋಷವಿದೆ. ಜೈಲಿನಲ್ಲಿ ಆರೋಪಿಗಳಿಗೆ ಫೈವ್​ ಸ್ಟಾರ್​ ಟ್ರೀಟ್​ಮೆಂಟ್​ ನೀಡಲಾಗಿದೆ. ಈ ಪ್ರಕರಣ ಬೆಳಗಕಿಗೆ ಬಂದ ಕೂಡಲೇ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದೊಂದು ಲ್ಯಾಂಡ್​​ ಮಾರ್ಕ್​ ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿತು. ಅಲ್ಲದೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿ ಜೈಲಿನ ಲಾನ್​ನಲ್ಲಿ ಸಿಗರೇಟ್​ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್​ ಎಚ್ಚರಿಸಿದೆ.

ರಮ್ಯಾ ಇನ್​ಸ್ಟಾ ಸ್ಟೋರಿಯಲ್ಲಿ ಏನಿದೆ?

ಸುಪ್ರೀಂ ಕೋರ್ಟ್​ನಲ್ಲಿ ತೀರ್ಪು ಬಂದ ಕೂಡಲೇ ಇನ್​ಸ್ಟಾಗ್ರಾಂ ಸ್ಟೋರಿ ಪೋಸ್ಟ್​ ಮಾಡಿರುವ ರಮ್ಯಾ, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ. ನಮ್ಮಲ್ಲಿ ಉಳಿದವರಿಗೆ ನಾನು ಹೇಳಲು ಬಯಸುವುದೇನೆಂದರೆ, ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿ, ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಇದು ದೀರ್ಘ ಮತ್ತು ಕಠಿಣವಾಗಿರಬಹುದು ಆದರೆ, ಸುರಂಗದ ಕೊನೆಯಲ್ಲಿ ಬೆಳಕು ಇದ್ದೇ ಇರುತ್ತದೆ. ಯಾವುದೇ ಕಾರಣಕ್ಕೂ ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯವನ್ನು ಒದಗಿಸಲಾಗುತ್ತದೆ. ಮುಖ್ಯವಾಗಿ, ನಿಮ್ಮ ಪ್ರಜ್ಞೆಗೆ ನಿಷ್ಠರಾಗಿರಿ ಎಂದು ಬರೆದುಕೊಂಡಿದ್ದಾರೆ.

Ramya

ಈ ಹಿಂದೆ ಸುಪ್ರೀಂ ಕೋರ್ಟ್, ಹೈಕೋರ್ಟ್​ ಆದೇಶವನ್ನು ಟೀಕಿಸಿ,​ ತೀರ್ಪನ್ನು ಕಾಯ್ದಿರಿಸಿದ ಸಂದರ್ಭದಲ್ಲಿಯು ರಮ್ಯಾ ಒಂದು ಟ್ವೀಟ್​ ಮಾಡಿದ್ದರು. ಸುಪ್ರೀಂಕೋರ್ಟ್​ ಹೇಳಿಕೆಗಳನ್ನು ಉಲ್ಲೇಖಿಸಿ ಲೈವ್​ ಲಾ ಸುದ್ದಿ ಮಾಧ್ಯಮ ಮಾಡಿರುವ ವರದಿಯ ಸ್ಕ್ರೀನ್​ಶಾಟ್​ ಅನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡ ನಟಿ ರಮ್ಯಾ, ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಆಶಾಕಿರಣ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದರು. ಹೀಗಾಗಿ ದರ್ಶನ್​ ಅಭಿಮಾನಿಗಳು ರಮ್ಯಾ ಅವರ ವಿರುದ್ಧ ಮುಗಿಬಿದ್ದಿದ್ದರು. ಇದಾದ ಬಳಿಕ ರಮ್ಯಾ ಅವರು ಎಲ್ಲ ಡಿ ಬಾಸ್​ (ದರ್ಶನ್​) ಅಭಿಮಾನಿಗಳೇ ನನ್ನ ಇನ್​ಸ್ಟಾಗ್ರಾಂ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಾಮೆಂಟ್​ಗಳೇ ಸಾಕ್ಷಿ ಎಂದು ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್​ ಮಾಡಿದ್ದರು. ರಮ್ಯಾ ಅವರು ಆ ರೀತಿ ಸ್ಟೋರಿ ಪೋಸ್ಟ್​ ಮಾಡುವುದಕ್ಕೆ ಕಾರಣ ಏನೆಂದರೆ, ಅನೇಕ ದರ್ಶನ್​ ಅಭಿಮಾನಿಗಳು ರಮ್ಯಾ ಅವರಿಗೆ ಇನ್​ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್​ ಮಾಡುತ್ತಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದರ್ಶನ್​ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್​ ಮಾಡಿದ ಸ್ಕ್ರೀನ್​ಶಾಟ್​ಗಳನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ರಮ್ಯಾ ಅವರು ಶೇರ್​ ಮಾಡಿಕೊಂಡರು. ದರ್ಶನ್​ ಅಭಿಮಾನಿಗಳು ಎಷ್ಟು ಕೆಟ್ಟದಾಗಿ ಕಾಮೆಂಟ್​ ಮಾಡಿದ್ದರು ಅಂದರೆ, ಅದನ್ನು ಊಹಿಸಲು ಸಾಧ್ಯವಿಲ್ಲ. ಇದರಿಂದ ಆಕ್ರೋಶಗೊಂಡ ರಮ್ಯಾ ದೂರು ಸಹ ದಾಖಲಿಸಿದರು. ಬಳಿಕ ಕೆಲ ದರ್ಶನ್​ ಅಭಿಮಾನಿಗಳನ್ನು ಬಂಧಿಸಿ ಜೈಲಿಗೂ ಸಹ ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net