ಇನ್ನು ಜಿಐಎಸ್ ನೋಂದಣಿ; 15 ದಿನದಲ್ಲಿ ನಾಲ್ಕು ತಾಲೂಕುಗಳಲ್ಲಿ ಪ್ರಾಯೋಗಿಕ ಜಾರಿ

Drone Survey
Published on

ರುದ್ರಣ್ಣ ಹರ್ತಿಕೋಟೆ ಬೆಳಗಾವಿ

ನೋಂದಣಿ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹಲವು ಉಪಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಇದೀಗ ಜಿಐಎಸ್ (ಭೌಗೋಳಿಕ ದತ್ತಾಂಶ) ಆಧಾರಿತ ತಂತ್ರಾಂಶ ರೂಪಿಸುವ ಪ್ರಯೋಗಕ್ಕೆ ಮುಂದಾಗಿದೆ. ಆ ಮೂಲಕ ನೋಂದಣಿ ಮುದ್ರಾಂಕ ನಿಗದಿ ವಿಚಾರದಲ್ಲಿ ನಡೆಯುತ್ತಿರುವ ಕಳ್ಳಾಟಗಳಿಗೆ ಬ್ರೇಕ್ ಹಾಕುವ ಸಂಕಲ್ಪ ತೊಟ್ಟಿದೆ. ನೋಂದಣಿ ಸಂದರ್ಭದಲ್ಲಿ ನಿರ್ದಿಷ್ಟ ಆಸ್ತಿ ಇರುವ ಪ್ರದೇಶ, ಯಾವ ರಸ್ತೆಗೆ ಹೊಂದಿಕೊಂಡಿದೆ ಎಂಬುದನ್ನು ಲೆಕ್ಕ ಹಾಕಿ, ಅದರ ಪ್ರಕಾರ ಮುದ್ರಾಂಕ ವಸೂಲಿ ಮಾಡಿ ತೆರಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಹೊಸ ವ್ಯವಸ್ಥೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ. ಆರಂಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಅನುಷ್ಠಾನವಾಗಲಿದ್ದು, ಬಳಿಕ ಹಂತಹಂತವಾಗಿ ನಗರಕ್ಕೆ ವಿಸ್ತರಣೆಗೊಳ್ಳಲಿದೆ. ಇನ್ನು 15 ದಿನಗಳಲ್ಲಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಸೋರಿಕೆಗೆ ತಡೆ: ಇ-ಖಾತೆ ಹಾಗೂ ಇತರ ಕಾರಣಗಳಿಂದ ನೋಂದಣಿ ಆದಾಯ ಸಂಗ್ರಹ ಸ್ವಲ್ಪ ತಗ್ಗಿದೆ. ಹೊಸ ವ್ಯವಸ್ಥೆ ಜಾರಿಗೆ ತರುವುದರಿಂದ ತೆರಿಗೆ ಸಂಗ್ರಹ ಹೆಚ್ಚಳವಾಗುತ್ತದೆ. ನೋಂದಣಿಯಲ್ಲಿ ಯಾವುದೇ ಲೋಪ ಇರುವುದಿಲ್ಲ.

ಭೌಗೋಳಿಕ ದತ್ತಾಂಶ ಬಳಕೆ: ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ದತ್ತಾಂಶ ಬಳಸಲಾಗುತ್ತದೆ. ಇ-ಆಡಳಿತ, ಕಂದಾಯ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಂಟಿಯಾಗಿ ಜಿಐಎಸ್ ಆಧಾರಿತ ದತ್ತಾಂಶವನ್ನು ಬಳಕೆ ಮಾಡಲಿವೆ.

ಇ-ಖಾತೆ ಸಮಸ್ಯೆ ಶೀಘ್ರ ತೆರೆ: ಹೊಸದಾಗಿ ಜಾರಿಗೆ ತಂದ ಇ-ಖಾತೆ ವ್ಯವಸ್ಥೆಯ ಲೋಪ ಸರಿಪಡಿಸುವ ಕೆಲಸ ನಡೆಯುತ್ತಿದೆ. ಕಂದಾಯ ಇಲಾಖೆ ಇದರ ಜವಾಬ್ದಾರಿ ತೆಗೆದುಕೊಂಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳ ಜತೆ ಸಾಕಷ್ಟು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಬೇಕಾದ ಎಲ್ಲ ಕ್ರಮ ಕೈಗೊಂಡಿದೆ. ಸಮಸ್ಯೆ ಬಗೆಹರಿದ ನಂತರ ಸಂಬಂಧಿಸಿದ ಎಲ್ಲ ಇಲಾಖೆಗಳಲ್ಲಿ ಏಕರೂಪದ ಇ-ಖಾತೆ ನೀಡಲಾಗುತ್ತದೆ.

ಮುದ್ರಾಂಕ ನಿಗದಿ ಹೇಗೆ?: ಸ್ಥಳ ಮಾರಾಟ ಮಾಡುವ ಜಮೀನಿನಲ್ಲಿ ಇರುವ ಕಟ್ಟಡ, ಜಾಗ ಯಾವ ರಸ್ತೆಗೆ ಹತ್ತಿರ ಇದೆ ಎಂಬ ಆಧಾರದಲ್ಲಿ ಮುದ್ರಾಂಕ ಸಾಫ್ಟ್​ವೇರ್​ನಿಂದ ನಿಗದಿ.

ಎಲ್ಲೆಲ್ಲಿ ಜಾರಿ?: ಮುಂದಿನ 15 ದಿನಗಳಲ್ಲಿ ಜಿಪಿಎಸ್ ತಂತ್ರಾಂಶ ಸಿದ್ಧವಾಗಲಿದೆ. ಅದನ್ನು ಪ್ರಾಯೋಗಿಕವಾಗಿ ನೆಲಮಂಗಲ, ಹೊಸದುರ್ಗ ತಾಲೂಕು ಹಾಗೂ ಕಲಬುರಗಿ ಮತ್ತು ಚಾಮರಾಜನಗರ ಜಿಲ್ಲೆಯ ತಲಾ ಒಂದು ತಾಲೂಕಿನಲ್ಲಿ ಜಾರಿಗೆ ತರಲಾಗುತ್ತದೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಒಟ್ಟಿಗೆ ಅನುಷ್ಠಾನಗೊಳ್ಳಲಿದೆ.

ಹೊಸ ವ್ಯವಸ್ಥೆ ಏಕೆ?

  • ಭೂ ಮಾರಾಟದ ವೇಳೆ ಅದರಲ್ಲಿನ ಕಟ್ಟಡಗಳ ಮಾಹಿತಿ ಮುಚ್ಚಿಡುವ ಪ್ರಕರಣ ಹೆಚ್ಚುತ್ತಿರುವುದು
  • ನೋಂದಣಿ ಪ್ರದೇಶವನ್ನು ವಿಭಾಗ ಮಾಡಿದಾಗ ಅದಕ್ಕೆ ತಕ್ಕಂತೆ ನೋಂದಣಿ ಶುಲ್ಕ ನಿಗದಿ ಮಾಡಲಾಗುತ್ತದೆ
  • ಆಸ್ತಿ ರಾಷ್ಟ್ರೀಯ, ರಾಜ್ಯ ಅಥವಾ ಜಿಲ್ಲಾ ರಸ್ತೆಗೆ ಹೊಂದಿಕೊಂಡಿದ್ದರೂ ಹಳ್ಳಿ ರಸ್ತೆ ಎಂಬಂತೆ ತೋರಿಸಲಾಗುತ್ತದೆ, ಇದರಿಂದ ನೋಂದಣಿ ಶುಲ್ಕ ಕಡಿಮೆಯಾಗುತ್ತದೆ

ಹೊಸ ಸಾಫ್ಟ್​ವೇರ್ ಕಾರ್ಯ

  • ನೋಂದಣಿ ಆಗುವ ಆಸ್ತಿ ಎಲ್ಲಿದೆ ಎಂಬುದರ ಮೇಲೆ ನಿಗಾ
  • ಎಷ್ಟು ಪ್ರದೇಶ ಮಾರಾಟ ಎಂಬ ಸಮಗ್ರ ಮಾಹಿತಿ ಸಂಗ್ರಹ
  • ಬಳಿಕ ಸ್ವಯಂ ಚಾಲಿತವಾಗಿ ಮುದ್ರಾಂಕ ದರದ ಲೆಕ್ಕಾಚಾರ
  • ದರ ಪಾವತಿಸಿ, ದಾಖಲೆಗಳನ್ನು ಸಲ್ಲಿಸಿದ ಬಳಿಕ ನೋಂದಣಿ
  • ಮುದ್ರಾಂಕಕ್ಕೆ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು
  • ಎಷ್ಟು ಪ್ರದೇಶ ಮಾರಾಟ ಎಂದು ನಮೂದಿಸಿದರೆ ದರ ನಿಗದಿ

ನೋಂದಣಿಯಲ್ಲಿ ಆಗುತ್ತಿರುವ ಮೋಸ ತಡೆಗಟ್ಟುವುದೇ ನಮ್ಮ ಮೊದಲ ಆದ್ಯತೆ. ಆದ್ದರಿಂದಲೇ ಹದಿನೈದು ದಿನದಲ್ಲಿ ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಹೊಸ ತಂತ್ರಾಂಶದ ಮೂಲಕ ಜಾರಿಗೆ ಬರಲಿದೆ. ಸುಳ್ಳು ಹೇಳಿ ಆಗುವ ನೋಂದಣಿಗಳಿಗೆ ಕಡಿವಾಣ ಬೀಳಲಿದೆ.

| ಕೃಷ್ಣ ಬೈರೇಗೌಡ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net