

ಬ್ರಿಸ್ಬೇನ್: ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ (Border-Gavaskar Trophy) ಮೂರನೇ ಪಂದ್ಯವು ಉಭಯ ತಂಡಗಳಿಗೆ ಮಹತ್ವದಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಈ ಪಂದ್ಯದ ಗೆಲುವು ಬಹುಮುಖ್ಯವಾಗಿದೆ. ಉಭಯ ತಂಡಗಳ ನಡುವಿನ ಸರಣಿ ಸದ್ಯ 1-1ರಲ್ಲಿ ಸಮಬಲಗೊಂಡಿದ್ದು, ಗಾಬಾ ಟೆಸ್ಟ್ ಗೆಲುವಿನ ಮೇಲೆ ಉಭಯ ತಂಡಗಳು ಕಣ್ಣಿಟ್ಟಿವೆ. ಇನ್ನೂ ಸರಣಿಯ ಮೂರನೇ ಪಂದ್ಯ ನಡೆಯುತ್ತಿರುವ ಗಾಬಾ ಕ್ರೀಡಾಂಗಣದ ಪಿಚ್ ಹಾಗೂ ಅಲ್ಲಿನ ವಾತಾವರಣ ಹೇಗಿರಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14ರಿಂದ 18ವರೆಗೆ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 5:50ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಮಳೆಭೀತಿ ಎದುರಾಗಿದ್ದು, ಪಂದ್ಯ ನಡೆಯುವ ಅಷ್ಟು ದಿನವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೊದಲ ದಿನ 80%, ಎರಡನೇ ದಿನ 50%, ಮೂರನೇ, ನಾಲ್ಕನೇ ಮತ್ತು ಐದನೇ ದಿನ 70% ಮಳೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ಡ್ರಾಗೊಂಡರೆ ಅಥವಾ ಫಲಿತಾಂಶ ಬಾರದೆ ಇದ್ದರೆ ಭಾರತದ ಪಾಲಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮುಚ್ಚಿದಂತಾಗುತ್ತದೆ.
ಗಾಬಾ ಪಿಚ್ ಬೌಲರ್ಗಳಿಗೆ ಸ್ವರ್ಗ ಎಂದು ಹೇಳಲಾಗಿದ್ದು, ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಬ್ಬರಿಗೂ ಲಾಭದಾಯಕವಾಗುವ ರೀತಿಯಲ್ಲಿ ಪಿಚ್ ಇರಲಿದೆ. ದಿನದ ಆರಂಭದಲ್ಲಿ ಹಸಿರಾಗಿರುವ ಪಿಚ್‌ಗಳು ಆರಂಭದಲ್ಲಿ ಬೌಲರ್ಗಳಿಗೆ ಸಹಕಾರಿಯಾದರು ಆ ನಂತರ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಪಿಚ್ ವರದಿ ಹೇಳುತ್ತದೆ.