

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವಂತೆ ಏಪ್ರಿಲ್ 14ರಂದು ಲಾಕ್ಡೌನ್ ಅಂತ್ಯವಾಗುತ್ತಲೇ ಎಲ್ಲ ರೈಲು ಸೇವೆಗಳು ತಕ್ಷಣವೆ ಮರುಆರಂಭವಾಗುವುದಿಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ.
ಕೆಲವೊಂದು ಮಾಧ್ಯಮಗಳಲ್ಲಿ ಲಾಕ್ಡೌನ್ ಅಂತ್ಯವಾಗುತ್ತಲೇ ರೈಲ್ವೆ ಸೇವೆಗಳು ಮರುಆರಂಭಗೊಳ್ಳಲಿವೆ ಎಂಬರ್ಥದ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಅಲ್ಲದೆ, ಸೇವೆಗಳ ಮರುಆರಂಭಕ್ಕೆ ರೈಲ್ವೆ ಇಲಾಖೆ ಹಲವು ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಆದರೆ ಈ ಎಲ್ಲ ಸುದ್ದಿಗಳು ಸುಳ್ಳು. ಲಾಕ್ಡೌನ್ ಅಂತ್ಯವಾಗುತ್ತಲೇ ರೈಲ್ವೆ ಸೇವೆಗಳನ್ನು ಮರುಆರಂಭಿಸುವ ಬಗ್ಗೆ ಯಾವುದೇ ವೇಳಾಪಟ್ಟಿಯನ್ನು ಸಿದ್ಧಪಡಿಸಿಲ್ಲ, ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿಲ್ಲ. ಇವೆಲ್ಲವೂ ಆಧಾರರಹಿತ ಸುದ್ದಿಗಳು. ಆದ್ದರಿಂದ, ಇವನ್ನು ನಂಬಬಾರದು ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
ಒಂದು ವೇಳೆ ಸೇವೆಗಳನ್ನು ಮರುಆರಂಭಿಸುವುದಾದರೆ, ಈ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.