

ನವದೆಹಲಿ: ಟಮ್ರ್ ಲೈಫ್ ಇನ್ಶೂರನ್ಸ್ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತಕ್ಕೆ ಜಿಎಸ್ಟಿಯಿಂದ ವಿನಾಯ್ತಿ ನೀಡಲು ಶನಿವಾರ ನಡೆದ ರಾಜ್ಯಗಳ ಸಚಿವರ ಸಮಿತಿಯ (ಗ್ರೂಪ್ ಆಫ್ ಮಿನಿಸ್ಟರ್ಸ್- ಜಿಒಎಂ) ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ.
ಸಾಮಾನ್ಯ ಜನರಿಗೆ ಲಾಭವಾಗುವಂತೆ ಆರೋಗ್ಯ ಮತ್ತು ಜೀವ ವಿಮಾ ಪ್ರೀಮಿಯಂಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಡಿತಕ್ಕೆ ಈ ಸಂಬಂಧ ರಚಿಸಲಾಗಿರುವ ಸಮಿತಿಯಲ್ಲಿದ್ದ ಬಹುತೇಕ ಸಚಿವರು ಸಹಮತ ವ್ಯಕ್ತಪಡಿಸಿದರು ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರರು ಹೊಂದಿರುವ 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆಯ ಪ್ರೀಮಿಯಂ ಮೇಲಿನ ಜಿಎಸ್ಟಿಗೆ ವಿನಾಯ್ತಿ ನೀಡಲು ಸಮಿತಿ ನಿರ್ಧರಿಸಿತು. ಆದರೆ, 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಆರೋಗ್ಯ ವಿಮೆಯ ಮೇಲೆ ಈಗಿರುವ ಶೇ. 18 ಜಿಎಸ್ಟಿ ಮುಂದುವರಿಯಲಿದೆ. ಇನ್ನೊಂದೆಡೆ, ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಸಚಿವರ ಸಮಿತಿ ಸಭೆಯೂ ಪ್ರತ್ಯೇಕವಾಗಿ ನಡೆಯಿತು. ಪ್ಯಾಕೇಜ್ಡ್ ಕುಡಿಯುವ ನೀರು, ಬೈಸಿಕಲ್ಗಳು, ಎಕ್ಸರ್ಸೈಜ್ ನೋಟ್ಬುಕ್ಗಳು, ಐಷಾರಾಮಿ ಕೈಗಡಿಯಾರಗಳು ಮತ್ತು ಶೂಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಬದಲಾವಣೆ ಮಾಡುವಂತೆ ಈ ಸಮಿತಿ ಜಿಎಸ್ಟಿ ಕೌನ್ಸಿಲ್ಗೆ ಸಲಹೆ ನೀಡಿತು.
ತೆರಿಗೆ ದರ ಬದಲಾವಣೆ ಮತ್ತು ಆರೋಗ್ಯ-ಜೀವವಿಮಾ ಪ್ರೀಮಿಯಂ ಮೇಲಿನ ಜಿಎಸ್ಟಿ ಕುರಿತು ಅಂತಿಮ ನಿರ್ಧಾರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆ ತೆಗೆದುಕೊಳ್ಳಲಿದೆ. ಜಿಎಸ್ಟಿ ಬದಲಾವಣೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 22,000 ಕೋಟಿ ರೂ. ಆದಾಯ ಕ್ರೋಡೀಕರಿಸಲು ಸಹಾಯವಾಗಲಿದೆ. ವಿಮಾ ಪ್ರೀಮಿಯಂಗಳ ಜಿಎಸ್ಟಿ ಕಡಿತದಿಂದ ಉಂಟಾಗುವ ಆದಾಯ ನಷ್ಟವನ್ನು ಇದರಿಂದ ಸರಿದೂಗಿಸಬಹುದಾಗಿದೆ ಎಂದು ಅಧಿಕಾರಿ ವಿವರಿಸಿದರು.
ಸಮಿತಿಯಲ್ಲಿ ಯಾರ್ಯಾರಿದ್ದಾರೆ?: ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆಗೆ ಸಂಬಂಧಿಸಿದ ಜಿಒಎಂನಲ್ಲಿ ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಕೇರಳದ ಸಚಿವರು ಸೇರಿದಂತೆ 6 ಸದಸ್ಯರಿದ್ದಾರೆ. ಆರೋಗ್ಯ ಮತ್ತು ಜೀವ ವಿಮಾ ಪ್ರೀಮಿಯಂಗಳಿಗೆ ಸಂಬಂಧಿಸಿದ 13 ಸದಸ್ಯರ ಜಿಒಎಂ ಅನ್ನು ಕಳೆದ ತಿಂಗಳು ರಚಿಸಲಾಗಿದ್ದು, ಇವತ್ತಿನದು ಅದರ ಮೊದಲ ಸಭೆಯಾಗಿದೆ. ಉತ್ತರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಗೋವಾ, ಗುಜರಾತ್, ಮೇಘಾಲಯ, ಪಂಜಾಬ್, ತಮಿಳುನಾಡು, ತೆಲಂಗಾಣ ರಾಜ್ಯಗಳ ಸಚಿವರು ಈ ಸಮಿತಿಯಲ್ಲಿದ್ದಾರೆ. ಅಕ್ಟೋಬರ್ ಅಂತ್ಯದೊಳಗೆ ಈ ಸಮಿತಿ ಜಿಎಸ್ಟಿ ಕೌನ್ಸಿಲ್ಗೆ ತನ್ನ ವರದಿಯನ್ನು ಸಲ್ಲಿಸಬೇಕಿದೆ.
ಟರ್ಮ್ಗೆ ಏಕೆ ಸಂಪೂರ್ಣ ವಿನಾಯ್ತಿ?: ಟಮ್ರ್ ಲೈಫ್ ಇನ್ಶೂರನ್ಸ್ ಪಾಲಿಸಿಗಳು ಸಂಪೂರ್ಣವಾಗಿ ಕುಟುಂಬದ ಆರ್ಥಿಕ ಭದ್ರತೆಗೆ ಸಂಬಂಧಿಸಿದ ಪಾಲಿಸಿಗಳಾದ್ದರಿಂದ ಅವುಗಳಿಗೆ ಜಿಒಎಂನಿಂದ ಜಿಎಸ್ಟಿ ವಿನಾಯ್ತಿ ಸಿಗಲಿದ್ದು, ಹೂಡಿಕೆ ಮತ್ತು ಲಾಭದ ಅಂಶವನ್ನು ಒಳಗೊಂಡಿರುವ ಇತರ ಇನ್ಶೂರನ್ಸ್ ಪಾಲಿಸಿಗಳ ಜಿಎಸ್ಟಿ ಮುಂದುವರಿಯಬಹುದು ಎಂದು ಈ ಹಿಂದೆಯೇ ವರದಿಯಾಗಿತ್ತು. ಟಮ್ರ್ ಇನ್ಶೂರನ್ಸ್ ಪಾಲಿಸಿಗಳು ಹೆಚ್ಚಿನ ಜನರಿಗೆ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಜಿಒಎಂ ಸಭೆಯಲ್ಲಿ ಈ ನಿರ್ಧಾರ ತಳೆದಿದೆ. ಟಮ್ರ್ ಇನ್ಶೂರನ್ಸ್ ಪಾಲಿಸಿಗಳು ಸಾಮಾನ್ಯವಾಗಿ 10ರಿಂದ 30 ವರ್ಷಗಳವರೆಗಿನ ನಿರ್ದಿಷ್ಟ ಅವಧಿಯ ಕವರೇಜ್ ಹೊಂದಿದ್ದು, ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಸಂಪೂರ್ಣ ಆರ್ಥಿಕ ಭದ್ರತೆ ಒದಗಿಸುತ್ತವೆ. ಅವು ಉಳಿತಾಯ, ಹೂಡಿಕೆ ಅಂಶ ಒಳಗೊಂಡಿರದೇ ಸಾವಿನ ನಂತರದ ಲಾಭವನ್ನು ಮಾತ್ರ ಒಳಗೊಂಡಿರುವುದರಿಂದ ಅವುಗಳ ಪ್ರೀಮಿಯಂ ಕೂಡ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಇನ್ಶೂರೆನ್ಸ್ ಅವಧಿಯ ಬಳಿಕವೂ ಪಾಲಿಸಿದಾರ ಬದುಕಿದ್ದರೆ, ಅವರಿಗೆ ಯಾವುದೇ ಹಣ ಮರುಪಾವತಿ ಸೌಲಭ್ಯ ಇರುವುದಿಲ್ಲ.
ಯಾವುದು ಇಳಿಕೆ: 20 ಲೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲಿರುವ ಜಿಎಸ್ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಲು; 10 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಬೈಸಿಕಲ್ಗಳ ಮೇಲಿನ ಜಿಎಸ್ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲು ಮತ್ತು ಎಕ್ಸರ್ಸೈಜ್ ನೋಟ್ಬುಕ್ಗಳ ಮೇಲಿನ ಜಿಎಸ್ಟಿ ಶೇ. 12ರಿಂದ ಶೇ. 5ಕ್ಕೆ ಇಳಿಸಲು ಜಿಒಎಂ ಶಿಫಾರಸು ಮಾಡಿದೆ.
ಯಾವುದು ಏರಿಕೆ?: 15 ಸಾವಿರ ರೂ.ಗಿಂತ ಹೆಚ್ಚಿನ ಬೆಲೆಯ ಶೂಗಳು, 25 ಸಾವಿರ ರೂ.ಗಿಂತ ಹೆಚ್ಚಿನ ಮೌಲ್ಯದ ಕೈಗಡಿಯಾರಗಳ ಮೇಲಿನ ಜಿಎಸ್ಟಿಯನ್ನು ಶೇ. 18ರಿಂದ 28ಕ್ಕೆ ಏರಿಸಲು ಸಲಹೆ ನೀಡಿದೆ. ಏರೇಟೆಡ್ ವಾಟರ್ ಮತ್ತು ಬಿವರೇಜಸ್ (ತಂಪು ಪಾನೀಯಗಳು) ಮೇಲಿನ ಜಿಎಸ್ಟಿ ಹೆಚ್ಚಳಕ್ಕೂ ಸಭೆಯಲ್ಲಿ ಒಲವು ವ್ಯಕ್ತವಾಯಿತು.
ಹಿರಿಯ ನಾಗರಿಕರಿಗೆ ಸಹಾಯ ಮಾಡಬೇಕೆಂಬುದೇ ಜಿಒಎಂನ ಪ್ರತಿಯೊಬ್ಬ ಸದಸ್ಯರ ಬಯಕೆ. ನಾವು ಈ ಶಿಫಾರಸುಗಳನ್ನು ಜಿಎಸ್ಟಿ ಕೌನ್ಸಿಲ್ಗೆ ಸಲ್ಲಿಸುತ್ತೇವೆ. ಅದು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.
| ಸಾಮ್ರಾಟ್ ಚೌಧರಿ ಬಿಹಾರ ಡಿಸಿಎಂ ಮತ್ತು ಜಿಒಎಂನ ಸಂಚಾಲಕ