ಫಾರ್ಚೂನರ್​ ಕಾರು, 21 ಲಕ್ಷ ರೂ. ಹಣ ಕೊಡಲಿಲ್ಲವೆಂದು ಹೆಣ್ಣು ಮಗುವಿನ ತಾಯಿಯನ್ನು ಹೊಡೆದು ಕೊಂದ ಪತಿ ಮನೆಯವರು

Dowry Case
Published on

ಲಖನೌ: ಮದುವೆ ಸಮಯದಲ್ಲಿ ಟೊಯೋಟಾ ಫಾರ್ಚುನರ್ ಮತ್ತು ₹ 21 ಲಕ್ಷ ನಗದು ಸೇರಿದಂತೆ ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಆಕೆಯ ಪತಿ ಮತ್ತು ಆತನ ಕುಟುಂಬ ಸದಸ್ಯರು ಅಮಾನುಷವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ.

ಮೃತರನ್ನು ಕರಿಷ್ಮಾ ಎಂದು ಗುರುತಿಸಲಾಗಿದ್ದು, ಮೃತಳ ಸಹೋದರ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿ ವಿಕಾಸ್​ ಹಾಗೂ ಆತನ ತಂದೆ ಸೋಮ್​ಪಾಲ್​ನನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, 2022ರ ಡಿಸೆಂಬರ್​ ತಿಂಗಳಲ್ಲಿ ಕರಿಷ್ಮಾ ಹಾಗೂ ವಿಕಾಸ್​ ವಿವಾಹವಾಗಿದ್ದರು. ಮದುವೆ ಸಮಯದಲ್ಲಿ 11 ಲಕ್ಷ ಮೌಲ್ಯದ ಚಿನ್ನ ಮತ್ತು ಎಸ್‌ಯುವಿಯನ್ನು ಉಡಗೊರೆಯಾಗಿ ನೀಡಲಾಗಿತ್ತು. ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ವಿಕಾಸ್​ ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿದ್ದು ರಾಜಿ ಸಂಧಾನ ನಡೆಸಿ 10 ಲಕ್ಷ ರೂಪಾಯಿ ಕೊಡಲಾಗಿತ್ತು.

ಇದಾದ ಕೆಲ ದಿನಗಳ ಬಳಿಕ ವಿಕಾಸ್​ ಕುಟುಂಬಸ್ಥರು ಹೊಸ ಫಾರ್ಚುನರ್​ ಕಾರು ಹಾಗೂ 21 ಲಕ್ಷ ರೂಪಾಯಿ ಹಣ ತರುವಂತೆ ಪೀಡಿಸಲು ಶುರು ಮಾಡಿದ್ದಾರೆ. ಇದಕ್ಕೆ ಕರಿಷ್ಮಾ ಒಪ್ಪದೇ ಇದ್ದಾಗ ಆಕೆಯ ಮೇಲೆ ವಿಕಾಸ್​ ಹಾಗೂ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಕರಿಷ್ಮಾಳ ಸಹೋದರ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಾದ ವಿಕಾಸ್​ ಹಾಗೂ ಆತನ ತಂದೆ ಸೋಮ್​ಪಾಲ್​ನನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಾದ ತಾಯಿ ರಾಕೇಶ್, ಸಹೋದರಿ ರಿಂಕಿ ಸಹೋದರರಾದ ಸುನಿಲ್ ಮತ್ತು ಅನಿಲ್ ತಲೆಮಾರಿಸಿಕೊಂಡಿದ್ದು ಅವರ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net