

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡರೆಯಲಿರುವ 17ನೇ ಆವೃತ್ತಿಯ 15ನೇ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಖನೌ ಸೂಪರ್ಜೈಂಟ್ಸ್ ಸವಾಲನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳಲು ಆರ್ಸಿಬಿ ಸಕಲ ಸಿದ್ಧತೆ ನಡೆಸಿದೆ. ಇನ್ನು ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸಲಿದ್ದು ಯಾರ ಕೈ ಹಿಡಿಯಲಿದೆ ಎಂದು ಕಾದು ನೋಡಬೇಕಿದೆ.
ಕಲ್ಕತ್ತಾ ನೈಟ್ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಹೀನಾಯ ಸೋಲು ಕಂಡಿದ್ದ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದು, ರನ್ರೇಟ್ ಕೂಡ ತೀವ್ರವಾಗಿ ಹದಗೆಟ್ಟಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ 21ರನ್ಗಳ ಜಯ ಕಂಡಿರುವ ಲಖನೌ ಸೂಪರ್ಜೈಂಟ್ಸ್ ತಂಡವು ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಯೋಜನೆ ರೂಪಿಸಿದೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದ ದೆಹಲಿ ಮೂಲದ ಯುವವೇಗಿ ಮಯಾಂಕ್ ಯಾದವ್ ತಾವಾಡಿದ ಚೊಚ್ಚಲ ಮ್ಯಾಚ್ನಲ್ಲೇ 155.8 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಮಹತ್ವದ ಪಂದ್ಯದಲ್ಲಿ ಆರ್ಸಿಬಿ ತಂಡ ಲಖನೌ ಸವಾಲನ್ನು ಹೇಗೆ ಸ್ವೀಕರಿಸಲಿದೆ ಮತ್ತು ಗೆಲುವಿನ ಹಳಿಗೆ ಮರಳಲಿದೆಯಾ ಎಂದು ಕಾದು ನೋಡಬೇಕಿದೆ.
ಆರ್ಸಿಬಿ ಹಾಗೂ ಲಖನೌ ನಡುವಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ತಜ್ಞರು ಹೇಳುವ ಪ್ರಕಾರ ಮಳೆ ಬೀಳುವ ಸಾಧ್ಯತೆ ಕಡಿಮೆ. ಆದರೆ, ರಾತ್ರಿಯ ಆಟವಾಗಿರುವುದರಿಂದ ಇಬ್ಬನಿ ಮಹತ್ವದ ಪಾತ್ರ ವಹಿಸಲಿದೆ. ರಾತ್ರಿ 7 ಗಂಟೆಯಿಂದ 9 ರ ನಡುವಿನ ವಾತಾವರಣವು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಾಗಲಿದೆ. ಆ ಸಂದರ್ಭದಲ್ಲಿ ಹೆಚ್ಚಿನ ಇಬ್ಬನಿ ಇರುವುದಿಲ್ಲ. ಪಂದ್ಯ ಪ್ರಾರಂಭವಾಗುವ ಸಂಜೆ 7 ಗಂಟೆಯಿಂದ 33 ಡಿಗ್ರಿ ಸೆಲ್ಸಿಯಸ್, ರಾತ್ರಿ 11 ಗಂಟೆಗೆ 27 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನವು ಇರುತ್ತದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದು ಪರಿಗಣಿಸಲಾಗಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಸಹಾಯ ಪಡೆಯುತ್ತಾರೆ. ಮೈದಾನ ಚಿಕ್ಕದಾಗಿರುವುದರಿಂದ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಯುವುದನ್ನು ಈ ಹಿಂದಿನ ಪಂದ್ಯದಲ್ಲಿ ನಾವು ನೋಡಿದ್ದೇವೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಈ ರೀತಿಯ ಪ್ರದರ್ಶನವನ್ನು ಎದುರು ನೋಡಬಹುದಾಗಿದೆ.
ಬೆಂಗಳೂರಿನ ಈ ಮೈದಾನದಲ್ಲಿ ಇದುವರೆಗೆ ಒಟ್ಟು 90 ಐಪಿಎಲ್ ಪಂದ್ಯಗಳು ನಡೆದಿವೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡ 37 ಪಂದ್ಯಗಳಲ್ಲಿ ಮತ್ತು ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ 49 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾವ ತಂಡ ಟಾಸ್ ಗೆಲ್ಲುತ್ತದೆಯೋ ಆ ತಂಡ ಮೊದಲು ಬೌಲಿಂಗ್ ಮಾಡಲು ಮುಂದಾಗುತ್ತದೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರ ಕೈ ಹಿಡಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.