

ಬೆಂಗಳೂರು: ಹಲವು ದಿನಗಳಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿದ್ದ ಹಿಂಗಾರು ಮಳೆ ಸೋಮವಾರದಿಂದ ತಗ್ಗಿದೆ. ಈಶಾನ್ಯ ಮಾನ್ಸೂನ್ ದುರ್ಬಲಗೊಂಡ ಪರಿಣಾಮ ಬಹುತೇಕ ಜಿಲ್ಲೆಗಳಲ್ಲಿ ವಾರಪೂರ್ತಿ ಒಣಹವೆ ಇರಲಿದೆ.
ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ‘ಅರ್ನಾಬ್’ ಚಂಡಮಾರುತದಿಂದ ಕರ್ನಾಟಕದ ಮೇಲೆ ಪರಿಣಾಮ ಬೀರಿಲ್ಲ. ಆದರೆ, ಬೇರೆ ರಾಜ್ಯಗಳ ಕೆಲವು ಭಾಗಗಳಲ್ಲಿ ಜೋರು ಮಳೆಯಾಗಲಿದೆ. ಈಶಾನ್ಯ ಮಾನ್ಸೂನ್ ಶುರುವಾಗಿದನಿಂದಲೂ ನಮಗೆ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಗಿ, ಭತ್ತ ಸೇರಿ ಇತರ ಖಾರೀಫ್ ಬೆಳೆಗಳಿಗೆ ಜೀವ ಬಂದಿದೆ ಎಂದರು.
ಆಂಧ್ರಪ್ರದೇಶ, ಒಡಿಶಾ ಕರಾವಳಿ, ತೆಲಂಗಾಣ, ದಕ್ಷಿಣ ಛತ್ತೀಸ್‌ಗಢ, ಜಾರ್ಖಂಡ್, ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ, ವಿದರ್ಭ, ಪೂರ್ವ ಮಧ್ಯಪ್ರದೇಶ ಮತ್ತು ಪೂರ್ವ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಅ.30ರವರೆಗೆ ಬಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.
ವಾರದಿಂದೀಚೆಗೆ ವಾಡಿಕೆಗಿಂತ ಅಧಿಕ:
ಮುಂಗಾರು ಕೊರತೆಯಿಂದ ಬರಗಾಲ ಎದುರಿಸುತ್ತಿದ್ದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅ.17ರಿಂದ ಅ.24ರವರೆಗೆ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಡಿಕೆಗಿಂತ ಶೇ.53, ದಕ್ಷಿಣ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.24 ಅಧಿಕ ಮಳೆಯಾದರೆ, ಮಲೆನಾಡು ಪ್ರದೇಶಗಳಲ್ಲಿ ವಾಡಿಕೆಯಷ್ಟೇ ಬಿದ್ದಿದೆ. ಆದರೆ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಂಕಿ-ಅಂಶಗಳಿಂದ ತಿಳಿದುಬಂದಿದೆ.