

ಬೆಂಗಳೂರು: ಉದ್ಯೋಗಿಯು ನಿವೃತ್ತಿಯ ನಂತರ ದಾಖಲೆಯಲ್ಲಿನ ಜನ್ಮ ದಿನಾಂಕವನ್ನು ಬದಲಾಯಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಉತ್ಪಾದನಾ ಘಟಕವೊಂದರಲ್ಲಿ ಕೆಲಸ ಮಾಡಿದ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
ಅರ್ಜಿದಾರರು 1983 ರಿಂದ 2006ರವರೆಗೆ ಅಂದರೆ ಅವರು ನಿವೃತ್ತಿಯಾಗುವವರೆಗೆ ಕೆಲಸ ಮಾಡಿದ್ದಾರೆ. ಆ ವ್ಯಕ್ತಿ, ತನ್ನ ಶಾಲಾ ಪ್ರಮಾಣಪತ್ರ ಮತ್ತು ಪಿಎಫ್ನಿಂದ ಪಡೆದ ಮಾಹಿತಿಯ ಆಧಾರದದ ಮೇಲೆ ವ್ಯಕ್ತಿಯ ಜನ್ಮದಿನಾಂಕ 1948 ಮಾರ್ಚ್ 10 ಎಂದು ದಾಖಲಿಸಿದ್ದಾರೆ. 2006ರಲ್ಲಿ ನಿವೃತ್ತಿಯಾದಾಗ ಅವರ ವಯಸ್ಸು 58 ವರ್ಷ ಎಂದು ಹೇಳಲಾಗಿದೆ. ಆದರೆ ಜನ್ಮ ಪ್ರಮಾಣಪತ್ರದ ಪ್ರಕಾರ ಇನ್ನೂ ನಾಲ್ಕು ವರ್ಷಗಳ ಬಳಿಕ ನಿವೃತ್ತಿ ಹೊಂದಬೇಕಾಯಿತು ಎಂದು ಅರ್ಜಿ ಸಲ್ಲಿಸಿದ ವ್ಯಕ್ತಿಯು ಕೋರ್ಟ್ಗೆ ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ದಾಖಲಾದ ಉದ್ಯೋಗಿಯ ಜನ್ಮದಿನಾಂಕವು ಸರಿಯಾಗಿದೆ. ಕಂಪನಿಗೆ ನೇಮಕಗೊಂಡ ಸಮಯದಲ್ಲಿ ಆ ವ್ಯಕ್ತಿ ತಮ್ಮ ಜನ್ಮ ದಿನಾಂಕವನ್ನು 1952 ಮಾರ್ಚ್ 20 ಎಂದು ಹೇಳಿದ್ದರು. ಜನ್ಮದಿನಾಂಕಕ್ಕೆ ಸಂಬಂಧಿಸಿದ ಯಾವುದೇ ಆಧಾರ ಅಥವಾ ಪುರಾವೆಗಳನ್ನು ನೀಡಿರಲಿಲ್ಲ. ಯಾವುದೇ ಸಮಸ್ಯೆಗಳನ್ನು ಹೇಳದೆ ಅವರು ಈಗಾಗಲೇ ತನ್ನ ನಿವೃತ್ತಿ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂದು ಕಂಪನಿಯು ನ್ಯಾಯಾಲಯಕ್ಕೆ ತಿಳಿಸಿದೆ.
ಈ ಪ್ರಕರಣವನ್ನು ಅವರು ಮೊದಲು ಲೇಬರ್ ಕೋರ್ಟ್ಗೆ ಕೊಂಡೊಯ್ದರು ಅಲ್ಲಿ ಅವರ ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿತು. ಈಗ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಪೀಠವು, ನಿವೃತ್ತಿಯಾದ ಎರಡು ವರ್ಷಗಳ ನಂತರ ವ್ಯಕ್ತಿಯು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ಅರ್ಜಿದಾರರ ಹಕ್ಕಿನ ಬಗ್ಗೆ ಅನುಮಾನ ಉಂಟಾಗುತ್ತಿದೆ. ನಿವೃತ್ತಿಯ ನಂತರ ಜನ್ಮ ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕೆಲಸ ಮಾಡುವ ಸಮಯದಲ್ಲಿ ಉದ್ಯೋಗಿ ತನ್ನ ಜನ್ಮ ದಿನಾಂಕವನ್ನು ಬದಲಾಯಿಸಲು ಅವಕಾಶವಿತ್ತು ಆದರೆ ಅದನ್ನು ಮಾಡಲಾಗಿಲ್ಲ. ಪಿಎಫ್ ಮತ್ತು ಶಾಲಾ ಪ್ರಮಾಣಪತ್ರಗಳಲ್ಲಿ ಹುಟ್ಟಿದ ದಿನಾಂಕ ಸರಿಯಾಗಿದೆ. ಆದರೆ ನಿವೃತ್ತಿ ಪಡೆದ ಬಳಿಕ ಅನಗತ್ಯ ಪ್ರಯೋಜನಗಳನ್ನು ಪಡೆಯಲು ಈ ಹಕ್ಕು ಸಲ್ಲಿಸಿದ್ದಾರೆ ಎಂದೂ ನ್ಯಾಯಾಲಯ ಹೇಳಿದೆ. ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು ನಿವೃತ್ತಿಯ ನಂತರ ನೌಕರರು ತಮ್ಮ ಜನ್ಮ ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು.