ರಾಹುಲ್​ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ; ಕಂಗನಾ ರಣಾವತ್​​ ಹೀಗೆನ್ನಲು ಕಾರಣವೇನು?

Untitled-design-90
Published on

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದೆ ಕಂಗನಾ ರಣಾವತ್​​ ಅವರು ಸೋಮವಾರ(ಆಗಸ್ಟ್​​​​​​ 12) ರಾಹುಲ್​ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್​ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್​ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ ಕಂಗನಾ, ರಾಹುಲ್​ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಟೀಕಿಸಿದರು.

ಹಿಂಡೆನ್​​​ಬರ್ಗ್​​​​ ವರದಿಯನ್ನು ರಾಹುಲ್​ಗಾಂಧಿ ಬೆಂಬಲಿಸುತ್ತಿದ್ದರು. ಅದು ಈಗ ನಿಷ್ಪ್ರಯೋಜಕ ಎಂದು ಸಾಬೀತಾಗಿದೆ. ರಾಹುಲ್​ಗಾಂಧಿ ದೇಶದ ಭದ್ರತೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದರು. ರಾಹುಲ್​​ಗಾಂಧಿ ವಿನಾಶಮಾಡುವ ವ್ಯಕ್ತಿ. ಅವರು ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ, ಈ ದೇಶವನ್ನು ನಾಶಪಡಿಸುವುದು ಅವರ ಅಜೆಂಡವಾಗಿದೆ. ರಾಹುಲ್ ಜೀ, ನಿಮ್ಮ ಜೀವನದುದ್ದಕ್ಕೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿ. ಈ ದೇಶದ ಜನರು ನಿಮ್ಮನ್ನು ಎಂದಿಗೂ ತಮ್ಮ ನಾಯಕನನ್ನಾಗಿ ಮಾಡುವುದಿಲ್ಲ. ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.

ಹಿಂಡೆನ್​ಬರ್ಗ್​​ ಆರೋಪ ಮಾಡಿದ ಬಳಿಕ ರಾಹುಲ್​ಗಾಂಧಿ ಭಾನುವಾರ(ಆಗಸ್ಟ್​​​ 11) ಭಾರತದ ಷೇರು ಮಾರುಕಟ್ಟೆಯ ಸಮಗ್ರತೆಯ ಬಗ್ಗೆ ಎಚ್ಚರಿಕೆ ನೀಡಿದರು. ಸೆಬಿ ಅಧ್ಯಕ್ಷೆ ಮಾಧಬಿ ಬುಚ್​ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು ಹಾಗೂ ಅವರಿನ್ನು ಏಕೆ ರಾಜೀನಾಮೆ ನೀಡಿಲ್ಲ ಎಂದು ಕೇಳಿದರು. ಇದಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಸ್ಟಾಕ್ ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಗಳು ರಾಜಿ ಮಾಡಿಕೊಂಡಿರುವುದರಿಂದ ಭಾರತೀಯ ಷೇರು ಮಾರುಕಟ್ಟೆಯಗೆ ಅಪಾಯವಿದೆ ಎಂದು ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯ ಎಂದು ರಾಹುಲ್​ಗಾಂಧಿ ಹೇಳಿದ್ದರು.

ಇತ್ತೀಚೆಗೆ ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್​ ಬುಚ್​​​ ಕಡಲಾಚೆಯ ಅದಾನಿ ಸಂಸ್ಥೆಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net