

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರ ಭಾಗದಲ್ಲಿರುವ ತ್ರಾಲ್ ಪ್ರದೇಶದಲ್ಲಿ ಅಂದಾಜು 3 ದಶಕಗಳ ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಉಗ್ರರಿಂದ ಮುಕ್ತವಾಗಿದೆ.
ಈ ವಿಷಯವನ್ನು ತಿಳಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾಪಡೆ ಸಿಬ್ಬಂದಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಿದರು. ಇದಾದ ನಂತರದಲ್ಲಿ ತ್ರಾಲ್ ಹಿಜ್ಬುಲ್ ಉಗ್ರರರಿಂದ ಮುಕ್ತವಾದಂತಾಗಿದೆ. 1989ರ ನಂತರದಲ್ಲಿ ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಉಗ್ರರು ಇಲ್ಲದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಭಾವಿ ಉಗ್ರನಾಗಿದ್ದ ಬುರ್ಹಾನ್ ವಾನಿ ತ್ರಾಲ್ ಮೂಲದವನಾಗಿದ್ದ. ಈತನನ್ನು ಭದ್ರತಾಪಡೆ ಸಿಬ್ಬಂದಿ ಕೆಲವರ್ಷಗಳ ಹಿಂದೆ ಹೊಡೆದುರುಳಿಸಿದ್ದರು.
ಕಳೆದ ಕೆಲವು ತಿಂಗಳಿನಿಂದ ಭದ್ರತಾಪಡೆ ಸಿಬ್ಬಂದಿ ದಕ್ಷಿಣ ಕಾಶ್ಮೀರದಲ್ಲಿ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದಾರೆ. ಜೂನ್ನಲ್ಲಿ ಇದುವರೆಗೂ ನಡೆದಿರುವ 12ಕ್ಕೂ ಹೆಚ್ಚು ಕಾರ್ಯಾಚರಣೆಯಲ್ಲಿ 35 ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಈ ತಿಂಗಳಲ್ಲಿ ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ಕಾರ್ಯಾಚರಣೆಯೂ ಅತ್ಯಂತ ಸುಗಮವಾಗಿ ಸಾಗಿದವು. ಉಗ್ರರನ್ನು ಹತ್ಯೆ ಮಾಡುವುದರಿಂದ ನಮಗೆ ಸಂತೋಷವಾಗುವುದಿಲ್ಲ. ಆದರೆ, ಶಸ್ತ್ರಸಜ್ಜಿತನಾದ ವ್ಯಕ್ತಿ ಎಂದಿಗೂ ಸಮಾಜಕ್ಕೆ ಘಾತುಕನೇ ಆಗಿರುತ್ತಾನೆ. ಆದ್ದರಿಂದ, ನಾವು ಅವರನ್ನು ಹತ್ಯೆ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಸಂತೋಷದ ವಿಷಯ ಎಂದರೆ, ಇತ್ತೀಚೆಗೆ ಈ ಭಾಗದಲ್ಲಿ ಉಗ್ರರ ನೇಮಕಾತಿಯೇ ಇಲ್ಲವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ಡಿಜಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.