

ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲೈನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಅದ್ಧೂರಿ ವಿವಾಹ ಸಮಾರಂಭಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು, ಉದ್ಯಮಿಗಳು ಸೇರಿದಂತೆ ಹೆಸರಾಂತ ವ್ಯಕ್ತಿಗಳು ಅನಂತ್ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಅನಂತ್-ರಾಧಿಕಾ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದ್ದು, ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವನ್ನು ಖ್ಯಾತ ಗಾಯಕ ಜಸ್ಟಿನ್ ಬೀಬರ್ ವಿಶೇಷವಾಗಿ ನಡೆಸಿಕೊಟ್ಟರು. ನೆರೆದಿದ್ದ ಗಣ್ಯರನ್ನು ತಮ್ಮ ಗಾಯನದ ಮೂಲಕ ರಂಜಿಸಿ, ಗಮನಸೆಳೆದ ಬೀಬರ್ಗೆ ಉತ್ತಮ ಸ್ಪಂದನೆ ದೊರಕಿತು. ಇನ್ನು ಪುತ್ರನ ವಿವಾಹಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ತಾವೇ ಮಾಡುತ್ತಿರುವ ನೀತಾ ಅಂಬಾನಿ, ತಮ್ಮಿಷ್ಟದ ವಿನ್ಯಾಸದಂತೆ ಮದುವೆಗೆ ಬೇಕಾದ ಅಲಂಕಾರ, ಸಿಂಗಾರಗಳನ್ನು ಮಾಡಿಸಿದ್ದಾರೆ. ಇದೀಗ ತಮ್ಮ ಕೈಗೆ ಹಾಕಿಸಿಕೊಂಡ ಮೆಹಂದಿ ಡಿಸೈನ್ ಬಹಳ ವಿನೂತನವಾಗಿದ್ದು, ಸದ್ಯ ಇದು ಈಗ ಎಲ್ಲರ ಕಣ್ಮನ ಸೆಳೆದಿದೆ.
ಪುತ್ರನ ಮದುವೆ ಸಮಾರಂಭದಲ್ಲಿ ಬಹಳ ಅದ್ಧೂರಿಯಾಗಿ ಕಂಗೊಳಿಸುತ್ತಿರುವ ನೀತಾ ಅಂಬಾನಿ, ತಮ್ಮ ಪ್ರೀತಿ ಪಾತ್ರರ ಹೆಸರನ್ನು ಸೇರಿಸುವ ಸಾಂಪ್ರದಾಯಿಕ ಭಾರತೀಯ ವಿವಾಹ ಪದ್ಧತಿಯಂತೆ ಮೆಹಂದಿಯನ್ನು ಹಾಕಿಸಿಕೊಂಡಿದ್ದಾರೆ. ತಮ್ಮ ಕುಟುಂಬದ ಅಷ್ಟು ಸದಸ್ಯರ ಹೆಸರನ್ನು ಈ ವಿಶೇಷವಾದ ಮೆಹಂದಿಯಲ್ಲಿ ಸೇರಿಸಲಾಗಿದೆ. ಒಂದು ಕೈಯಲ್ಲಿ ಕುಟುಂಬದವರ ಹೆಸರಿದ್ದರೆ, ಮತ್ತೊಂದು ಕೈಯಲ್ಲಿ ನವಜೋಡಿ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಹೆಸರು ಮಾತ್ರ ಇದೆ.
ನೀತಾ ಅಂಬಾನಿ ಅವರ ಮೆಹಂದಿಯಲ್ಲಿ ಮಗಳು ಇಶಾ ಮತ್ತು ಅವರ ಪತಿ ಆನಂದ್ ಪಿರಾಮಲ್, ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ, ಪತಿ ಮುಖೇಶ್ ಅಂಬಾನಿ ಅವರ ಹೆಸರುಗಳಿವೆ. ಇನ್ನು ಅವರ ಹಸ್ತದ ಮೇಲೆ ರಾಧಾ-ಕೃಷ್ಣ ಜೋಡಿಯನ್ನು ಚಿತ್ರಿಸಲಾಗಿದೆ. ನೀತಾ ಅಂಬಾನಿಯವರ ಮೆಹಂದಿ ವಿನ್ಯಾಸದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೋಡುಗರ ಗಮನಸೆಳೆದಿದೆ.