ಬಂಧು ಬಳಗ ಎನ್ನುವುದು ಯಮನ ಸೈನ್ಯ(ಚಮು). ಅದರಲ್ಲೂ ಛದ್ಮವೇಷವನ್ನು ಧರಿಸಿರುವ ಯಮನ ಸೈನ್ಯ. ಅವರು ತೋರುವ ನಲುಮೆ-ಒಲುಮೆಗಳು ಕಷ್ಟಗಳ ಕೊಡುಗೆ. ಅವರು ಮಾಡುವ ಉಪಕಾರದಿಂದ ಆತ್ಮಕ್ಕೆ ಕುಂದುಂಟಾಗುತ್ತದೆ. ಹಾಗಾಗಿ ನೀನು ಜನರಿಗೆ ಬಲಿಯಾಗದಿರು ಎನ್ನುತ್ತದೆ ಈ ಕಗ್ಗ.
ಜನಿಸಿದ ಕ್ಷಣದಿಂದಲೇ ಯಮನ ಕುಣಿಕೆಯು ನೆತ್ತಿಯ ಮೇಲೆ ತೂಗಾಡಲು ತೊಡಗುತ್ತದೆ. ಯಾವಾಗ ಆ ಸಾವಿನ ಉರುಳು ಕೊರಳಿಗೆ ಬೀಳುತ್ತದೆ ಎನ್ನುವುದಕ್ಕಿಲ್ಲ. ಇದರ ಜೊತೆಗೆ ಹುಟ್ಟು ಸಾವಿನ ನಡುವೆ ಒಡನಾಡುವ ಬಂಧು-ಬಳಗವು ಯಮನ ಸೈನಿಕರಂತೆ ಹಲವು ವಿಧದಿಂದ ಕಾಡುತ್ತಾರೆ. ಮೋಹ-ಮಮತೆಗಳಿಂದ ಬಂಧಿಸಿ
ಮನಸ್ಸನ್ನು ದುರ್ಬಲಗೊಳಿಸುವುದು, ದ್ವೇಷ-ಮತ್ಸರಗಳ ಮೂಲಕ ನರಳಿಸುವುದು, ಸಹಾಯ-ಸಹಕಾರವನ್ನಿತ್ತು ಋಣದ ಎಳೆಯಲ್ಲಿ ನಿಯಂತ್ರಿಸುವುದು ಹೀಗೆ ಹಲವು ವಿಧದಲ್ಲಿ ಸುಗಮ ಜೀವನಕ್ಕೆ ತೊಡಕಾಗುತ್ತವೆ. ಭಾವವೆಂಬ ವೇಷ ತೊಟ್ಟು ಸಂಚು ಹೂಡುತ್ತವೆ. ರಕ್ತ ಸಂಬಂಧವಿರಲಿ, ಭಾವಿಸಿಕೊಂಡ ಸಂಬಂಧವಿರಲಿ ಭಾವಸ್ಪಂದನವಿಲ್ಲದೆ ಉಳಿಯಲಾರವು. ಸಂಬಂಧಗಳ ನಡುವೆ ಪಡೆಯುವ, ಸ್ವಹಿತವನ್ನು ಸಾಧಿಸುವ ಹಂಬಲವು
ಹೆಚ್ಚಾದರೆ ಬಾಂಧವ್ಯವೆ ಬಂಧನವೆನ್ನಿಸುತ್ತದೆ. ನನ್ನದು, ನನಗಷ್ಟೇ ಸೇರಿದ್ದು ಎಂಬ ಸ್ವಾಮಿತ್ವ, ಕಳೆದುಕೊಳ್ಳುವ ಭಯ, ಪ್ರಾಮುಖ್ಯತೆಯನ್ನು ಪಡೆಯುವ ತುಡಿತಗಳು ಸಂಬಂಧಗಳ ನಡುವೆ ಕಿತ್ತಾಡುವ ಸ್ಥಿತಿಯನ್ನು ತಂದೊಡ್ಡುತ್ತವೆ. ಪ್ರೇಮವೆನುವ ಪರಿಶುದ್ಧ ಬೆಳಕಿನ ಲಾಂದ್ರದ ಗಾಜಿಗೆ ಸ್ವಾರ್ಥದ ಮಸಿಯು ಕವಿದಂತಾಗುತ್ತದೆ.
ಇನ್ನು ಕೆಲವು ಸ್ನೇಹ-ಸಂಬಂಧಗಳು ಕಾರಣವೆ ಇಲ್ಲದೆ ದ್ವೇಷ ಸಾಧಿಸುವ, ಮತ್ಸರಿಸುವ ಮೂಲಕ ಪ್ರತಿಕ್ಷಣವನ್ನೂ ಭಾರವಾಗಿಸುತ್ತವೆ. ಮರಕ್ಕೆ ತಗುಲಿದ ಬಂದಣಿಗೆಯ ಹಾಗೆ ಜೊತೆಗೆ ಇದ್ದು ಬದುಕನ್ನು ನಾಶ ಪಡಿಸಲೆತ್ನಿಸುವ, ಹೆಜ್ಜೆಹೆಜ್ಜೆಗೂ ನೋಯಿಸಿ, ನಿರುತ್ಸಾಹಗೊಳಿಸುವ ಬಾಂಧವ್ಯಗಳು ಬದುಕಿಗಂಟಿದ ಶಾಪ. ಹೀಗೆಯೆ ಲಾಭ ಪಡೆಯುವ ಉದ್ದೇಶದಿಂದಲೇ ಹತ್ತಿರವಾಗುವ, ಬಹಳ ಅಕ್ಕರೆ-ಆತ್ಮೀಯತೆಯನ್ನು ತೋರುವ ಕೆಲವು ನಂಟುಗಳು ನಯವಾಗಿ ವಂಚಿಸುತ್ತವೆ. ತಮ್ಮ ಉದ್ದೇಶವು ಪೂರ್ಣಗೊಂಡ ಬಳಿಕ ಸದ್ದಿಲ್ಲದೆ ಎದ್ದು ನಡೆಯುತ್ತವೆ. ಕೆಲವೊಮ್ಮೆ ಬಿಡಿಸಿಕೊಳ್ಳಲಾಗದ ಕಗ್ಗಂಟಾಗಿ ಬದುಕನ್ನೇ ಆಹುತಿ ತೆಗೆದುಕೊಳ್ಳುವುದು ಸುಳ್ಳಲ್ಲ.
ಹೀಗೆ ಹಲವು ವಿಧದಿಂದ ಬದುಕಿಗೆ ಬೆಸೆದುಕೊಳ್ಳುವ ಸ್ನೇಹ-ಸಂಬಂಧಗಳು ವ್ಯಕ್ತಿಯದ್ದೇ ಆಯ್ಕೆಯಲ್ಲ. ಆತನ ಪೂರ್ವಾರ್ಜಿತ ಕರ್ಮಶೇಷ, ಋಣದ ಪಾಶಕ್ಕೆ ಅನುಗುಣವಾಗಿ ಬಾಂಧವ್ಯಗಳು ರೂಪುಗೊಳ್ಳುತ್ತವೆ. ಋಣವು ತೀರುವವರೆಗೆ ಜನುಮಜನುಮಗಳವರೆಗೂ ಹಿಂಬಾಲಿಸಿ, ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತವೆ. ಹಾಗಾಗಿಯೆ ಸಂಬಂಧವೆಂದರೆ ಯಮನ ಸೈನ್ಯ, ಬೇಡವೆಂದರೂ ಬಿಡದೆ ಕಾಡುವ ನೋವಿನ ನೆರಳು.
ಹಾಗಾದರೆ ಯಾವ ಆಯ್ಕೆಗಳೂ ಇಲ್ಲದಿರುವ, ಕರ್ಮ ಮತ್ತು ಋಣಾನುಸಾರಿಯಾಗಿ ನಡೆಯುವ ಜೀವನವು ನಿಸ್ಸಾರವೇನು? ಹುಟ್ಟು-ಸಾವಿನ ನಡುವಿನ ಬದುಕು, ಬಾಂಧವ್ಯಗಳಿಂದಾಗಿ ಬರಡಾಗುತ್ತದೆಯೇನು? ಖಂಡಿತಾ ಇಲ್ಲ. ಲೌಕಿಕ ದೃಷ್ಟಿಯಿಂದ ನೋಡುವುದಾದರೆ ಜೀವನ ಯಾತ್ರೆಯಲ್ಲಿ ಜೊತೆಗೂಡಿದವರೆಲ್ಲರೂ ಬದುಕಿಗೆ ಒಂದಲ್ಲ ಒಂದು ಪಾಠವನ್ನು ಕಲಿಸುತ್ತಾರೆ. ಮೋಹ-ಮಮತೆಯ ಬಂಧುತ್ವವು ದೌರ್ಬಲ್ಯಗಳನ್ನು ಕಳಚಿಕೊಳ್ಳಲು, ಮಾರ್ದವತೆಯಿಂದ ಸ್ಪಂದಿಸಲು ಕಲಿಸಿದರೆ, ದ್ವೇಷ-ಮತ್ಸರಗಳಿಂದೊಡನಾಡುವ ಜೀವಗಳು ಮೋಹ ಮುಕ್ತರಾಗಲು ಕಲಿಸುತ್ತವೆ. ಸಹಾಯ ಮಾಡುವ ನೆಪದಲ್ಲಿ ಕೊಳ್ಳೆಹೊಡೆಯುವ ನಯವಂಚಕರು ಬದುಕಿನ ಭ್ರಮೆಯನ್ನು ಕಳಚುತ್ತಾರೆ. ಭಾವನಾತ್ಮಕವಾದ ಮತ್ತು ಅವಾಸ್ತವಿಕ ಕನಸುಗಳನ್ನು ಬೆನ್ನತ್ತಿ ಹೋಗುವ ಮನಸ್ಸಿಗೆ ಕಡಿವಾಣ ಬಿದ್ದಂತಾಗುತ್ತದೆ. ನೋವು-ನಲಿವು, ಒಲುಮೆ-ಹಗೆಗಳೆಲ್ಲವೂ ಜೀವನದ ಕ್ಷಣಿಕತೆಯನ್ನು ಅರ್ಥೈಸುವುದರೊಂದಿಗೆ ಬದುಕಿನ ನಿಜವಾದ ಉದ್ದೇಶವನ್ನು ಕಂಡುಕೊಳ್ಳಲು ಪ್ರೇರೇಪಿಸುತ್ತದೆ.
ಪರಮಾತ್ಮನನ್ನು ಸೇರಲು ಯಾತ್ರೆ ಹೊರಟಿರುವ ಜೀವಾತ್ಮವು ಜನನ-ಮರಣಗಳ ನಡುವಿನ ಜೀವನದಲ್ಲಿ ಋಣದ ಬಹಳ ದೊಡ್ಡ ಹೊರೆಯನ್ನೆ ಹೊತ್ತು ಮುನ್ನಡೆಯುತ್ತದೆ. ದೇವ ಋಣ, ಋಷಿ ಋಣ ಮತ್ತು ಪಿತೃ ಋಣ ಎಂದು ಮೂರು ಬಗೆಯ ಋಣಗಳಿವೆ. ಇವುಗಳನ್ನು ತೀರಿಸಿದರೆ ಋಣದ ಹೊರೆಯು ಕಡಿಮೆಯಾಗುತ್ತದೆ. ಅದನ್ನುಳಿದು ಬಂಧು-ಬಳಗದಿಂದ ಮತ್ತೆಮತ್ತೆ ನೆರವು ಪಡೆದರೆ ಇನ್ನಷ್ಟು ಋಣದ ಎಳೆಗಳಿಗೆ ಸಿಲುಕಿ ಆತ್ಮೋನ್ನತಿಯ ಪಯಣವು ನಿಧಾನವಾಗುತ್ತದೆ, ಆತ್ಮದ ಪಯಣಕ್ಕೆ ತೊಡಕಾಗುತ್ತದೆ. ಈ ಸತ್ಯವು ಅರ್ಥವಾದರೆ ವ್ಯಕ್ತಿಯು ಪ್ರೀತಿ-ಸ್ನೇಹಕ್ಕೆ ವಶನಾಗದೆ ತನ್ನ ಮಿತಿಯೊಳಗೆ ಬಾಳುತ್ತಾನೆ. ಲೌಕಿಕದ ಬಾಳುವೆಯು ಆತ್ಮೋತ್ಕರ್ಷಕ್ಕೆ ಪೂರಕವಾಗಿರುವಂತೆ ಎಚ್ಚರ ವಹಿಸುತ್ತಾನೆ.
ಲೇಖಕರು ಉಪನ್ಯಾಸಕರು, ಕವಯಿತ್ರಿ)
(ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com))