ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ! ಯಾವ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ? ಇಲ್ಲಿದೆ ವರದಿ

ವಿಜಯವಾಣಿ - 2024-07-13T070006.162
Published on

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಉತ್ತರ ಕನ್ನಡದ ಕುಮಟಾ, ಹೊನ್ನಾವರ, ಶಿರಸಿ ಭಾಗಗಳಲ್ಲಿ ಮಳೆಯಿಂದ ಗುಡ್ಡ ಕುಸಿತ, ಹೆದ್ದಾರಿ ಸಂಚಾರ ಬಂದ್​ ಆಗಿತ್ತು. ಇದೀಗ ಮಳೆಯ ಆರ್ಭಟ ಮುಂದುವರೆಯಲಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗಗಳಲ್ಲಿ ಎಂದಿನಿಂತೆ ಮಳೆ ವ್ಯಾಪಕವಾಗಿ ಆವರಿಸಿಕೊಂಡಿದೆ. ಕಳೆದ 15 ದಿನಗಳಿಂದ ಕರಾವಳಿ ಪ್ರದೇಶಗಳಲ್ಲಿ ಸುರಿದ ಧಾರಕಾರ ಮಳೆಗೆ ಜನರು ಸಂಪೂರ್ಣ ತತ್ತರಿಸಿದ್ದರು. ಮನೆಯಿಂದ ಹೊರಬರಲಾಗದೆ, ಪ್ರವಾಹ ಭೀತಿ ಉಂಟಾಗುವ ಭೀತಿ ವ್ಯಕ್ತಪಡಿಸಿದ್ದರು. ಇದೀಗ ವರದಿಗಳ ಪ್ರಕಾರ, ಈ ವಾರ ಪೂರ ವರುಣ ಆರ್ಭಟ ಜೋರಾಗಿಯೇ ಇರಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬಿರುಸಿನ ಮಳೆ ಸುರಿಯಲಿದ್ದು, ಕರಾವಳಿ ಜಿಲ್ಲೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಂದಿನಂತೆ ವರುಣನ ಆರ್ಭಟ ಮತ್ತಷ್ಟು ಮುಂದುವರೆಯಲಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ. ಇದು ಹೀಗೆ ಮುಂದುವರಿದ್ರೆ, ನದಿಗಳು ಉಕ್ಕಿ ಹರಿಯುವ ಭೀತಿ ಎದುರಾಗಲಿದೆ. ಇನ್ನು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಆರೆಂಜ್​ ಅಲರ್ಟ್ ಘೋಷಿಸಲಾಗಿದೆ.

ಭಾರೀ ಮಳೆಯ ಮುನ್ಸೂಚನೆ ಕೊಟ್ಟಿರುವ ಹವಾಮಾನ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದ್ದು, ಕರಾವಳಿ ಪ್ರದೇಶಗಳಲ್ಲಿ ಸಮುದ್ರ, ನದಿಗಳಿಂದ ದೂರ ಉಳಿಯುವುದು ಸೂಕ್ತ ಎಂದು ತಿಳಿಸಿದೆ. ಇನ್ನು ಬೆಂಗಳೂರಿನಲ್ಲಿ ಮರದ ಕಳೆಗೆ ನಿಲ್ಲುವುದು, ವಿದ್ಯುತ್​ ಕಂಬದ ಸಮೀಪ ನಿಲ್ಲದೆ ಇರುವುದು ಒಳಿತು. ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net