

ಹರಾರೆ: ಆರಂಭಿಕ ಪಂದ್ಯದ ಆಘಾತದ ಬಳಿಕ ಸತತ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಭಾರತದ ಯುವ ತಂಡ ಇದೀಗ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಆತಿಥೇಯ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಕೊನೇ 2 ಪಂದ್ಯಗಳು ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಶುಭಮಾನ್ ಗಿಲ್ ಬಳಗ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತ್ತು. ಹಿರಿಯರ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯ ನಡುವೆ ಯುವ ಬ್ಯಾಟರ್ಗಳು ಮೈಮರೆತಿದ್ದರು. ಆದರೆ ಕಳೆದೆರಡು ಪಂದ್ಯಗಳಲ್ಲಿ ಭಾರತ ತಂಡ ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿದೆ. ಅಭಿಷೇಕ್ ಶರ್ಮ, ಶುಭಮಾನ್ ಗಿಲ್ ಮತ್ತು ಋತುರಾಜ್ ಗಾಯಕ್ವಾಡ್ ರನ್ಮಳೆ ಹರಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರದಲ್ಲಿ ಟಿ20 ತಂಡದಲ್ಲಿ ಖಾಲಿಯಾಗಿರುವ ಅಗ್ರ ಕ್ರಮಾಂಕದ ಬ್ಯಾಟರ್ ಸ್ಥಾನವನ್ನು ಒಲಿಸಿಕೊಳ್ಳಲು ಪೈಪೋಟಿ ನಡೆದಿದೆ. ಇದೇ ವೇಳೆ ರವೀಂದ್ರ ಜಡೇಜಾರಿಂದ ತೆರವಾಗಿರುವ ಸ್ಥಾನಕ್ಕೆ ತಾನೇ ಸೂಕ್ತ ಅಭ್ಯರ್ಥಿ ಎಂದು ವಾಷಿಂಗ್ಟನ್ ಸುಂದರ್ ನಿರೂಪಿಸಿದ್ದಾರೆ. ಇದರಿಂದಾಗಿ ಅವರು ಮುಂಬರುವ ಶ್ರೀಲಂಕಾ ಪ್ರವಾಸದ ಟಿ20 ಸರಣಿಗೂ ಸ್ಥಾನ ಉಳಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಜಿಂಬಾಬ್ವೆಯಲ್ಲಿ 3ನೇ ಪಂದ್ಯಕ್ಕೆ ಮರಳಿದ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆಗೆ ಹೆಚ್ಚಿನ ಅವಕಾಶ ಲಭಿಸಲಿಲ್ಲ. ಆದರೆ ಇವರು ಈಗಲೂ ತಂಡದ ಪ್ರಮುಖ ಆಟಗಾರರೇ ಆಗಿದ್ದಾರೆ. ಇನ್ನು ಸ್ಪಿನ್ನರ್ ರವಿ ಬಿಷ್ಣೋಯಿ ಕೂಡ ಸರಣಿಯಲ್ಲಿ ಭಾರತದ ಪ್ರಮುಖ ಅಸ್ತ್ರವೆನಿಸಿದ್ದಾರೆ.
ಟೀಮ್ ನ್ಯೂಸ್:
ಭಾರತ: 4ನೇ ಪಂದ್ಯಕ್ಕೆ ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ. ಆದರೆ 4ನೇ ಪಂದ್ಯದಲ್ಲೇ ಸರಣಿ ಗೆದ್ದರೆ ಕೊನೇ ಪಂದ್ಯಕ್ಕೆ ಕೆಲ ಬದಲಾವಣೆ ನಿರೀಸಬಹುದು. ಇನ್ನು ಬೌಲಿಂಗ್ ವಿಭಾಗದಲ್ಲಿ ಕಳೆದ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಮುಕೇಶ್ ಕುಮಾರ್ ಈ ಬಾರಿ ಮರಳಬಹುದು ಮತ್ತು ಆವೇಶ್ ಖಾನ್ಗೆ ವಿಶ್ರಾಂತಿ ನೀಡಬಹುದು.
ಜಿಂಬಾಬ್ವೆ: ಸರಣಿಯ ಮೊದಲ ಪಂದ್ಯ ಗೆದ್ದು ಬೀಗಿದ್ದ ಜಿಂಬಾಬ್ವೆ ಕಳೆದೆರಡು ಪಂದ್ಯಗಳಲ್ಲಿ ಭಾರತೀಯ ಬಲಿಷ್ಠ ಆಟದೆದುರು ಮಂಕಾಗಿದೆ. ವೇಗಿ ಬ್ಲೆಸಿಂಗ್ ಮುಜರಬಾನಿಗೆ ಇತರರಿಂದ ಸಮರ್ಥ ಬೆಂಬಲ ಸಿಗುತ್ತಿಲ್ಲ. ಇದರ ನಡುವೆಯೂ ತಂಡದಲ್ಲಿ ಬದಲಾವಣೆ ಅನುಮಾನ.
ಆರಂಭ: ಸಂಜೆ 4.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
ಆರಂಭಿಕರಿಗೆ ಆದ್ಯತೆ, ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ಕಡೆಗಣನೆ!
ಭಾರತ ತಂಡ ಕಳೆದ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ 3ನೇ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ನೀಡಿ, ತಂಡದ ತಜ್ಞ ಆರಂಭಿಕ ಯಶಸ್ವಿ ಜೈಸ್ವಾಲ್ರನ್ನು ಆಡುವ 11ರ ಬಳಗದಿಂದ ಹೊರಗಿಟ್ಟಿತ್ತು. ಆದರೆ ಇದೀಗ ಜಿಂಬಾಬ್ವೆ ಪ್ರವಾಸದಲ್ಲಿ ಆರಂಭಿಕರಿಗೆ ಹೆಚ್ಚಿನ ಆದ್ಯತೆ ನೀಡಿ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಹೊರಗಿಡುತ್ತಿರುವುದು ವಿಚಿತ್ರವೆನಿಸುತ್ತಿದೆ. ಐಪಿಎಲ್ ಸಹಿತ ಸಾಮಾನ್ಯವಾಗಿ ಟಿ20ಯಲ್ಲಿ ಆರಂಭಿಕರಾಗಿ ಆಡುವ ನಾಲ್ವರು ಬ್ಯಾಟರ್ಗಳೇ (ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮ, ಋತುರಾಜ್ ಗಾಯಕ್ವಾಡ್) ಕಳೆದ ಪಂದ್ಯದಲ್ಲಿ ಅಗ್ರ 4 ಕ್ರಮಾಂಕದಲ್ಲಿ ಆಡಿದ್ದರು. ಇದೇ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಯಾನ್ ಪರಾಗ್ರನ್ನು ಹೊರಗಿಡಲಾಗಿತ್ತು. 2026ರ ಟಿ20 ವಿಶ್ವಕಪ್ಗೆ ತಂಡ ಕಟ್ಟಲು ಮುಂದಾಗಿರುವ ಈ ಸಮಯದಲ್ಲಿ ತಂಡದ ಈ ನಡೆ ಗೊಂದಲ ಮೂಡಿಸಿದೆ.